ನರೇಗಾದಿಂದ ಸ್ವಾವಲಂಬಿ ಜೀವನ ನಡೆಸುತ್ತಿರುವ ಇರುವೈಲಿನ ರೇಮಂಡ್ ಲೋಬೋ
ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊನ್ನೆಪದವು ಸಮೀಪದ ಕನೇಲ್ ನ ರೇಮಂಡ್ ಲೋಬೋ ಅವರು ನರೇಗಾದ ಮೂಲಕ ವಿವಿಧ ಕೃಷಿ ಚಟುವಟಿಕೆಗಳನ್ನು ಮಾಡಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಕೃಷಿಕರಿಗೆ ಹಾಗೂ ಜನಸಾಮಾನ್ಯರಿಗೂ ತಾವು ಸ್ವಾವಲಂಬಿಗಳಾಗಿ ಜೀವಿಸಬೇಕು ಎಂಬ ಆಶಯದೊಂದಿಗೆ ಪರಿಚಯಿಸಲ್ಪಟ್ಟ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ಈ ಯೋಜನೆಯ ಫಲ ಪಡೆದ ಅನೇಕ ಜನರು ಇಂದು ಸಂತಸದ ದಿನಗಳನ್ನು ಕಾಣುತ್ತಿದ್ದಾರೆ ಅವರಲ್ಲಿ ರೇಮಂಡ್ ಲೋಬೋ ಅವರು ಒಬ್ಬರು.
ನರೇಗಾದ ಮೂಲಕ ಅಡಿಕೆ ಕೃಷಿ, ಹಂದಿ ಶೆಡ್, ಗೊಬ್ಬರ ಗುಂಡಿ, ಗೊಬ್ಬರ ಗ್ಯಾಸ್ ಮಾಡಿ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ.
ಯೋಜನೆಯ ಮೂಲಕ 2022-23 ರಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದು ಅದೀಗ ಈಗ ಬೆಳೆದು ಫಲ ಕೊಡಲು ಸಜ್ಜಾಗಿ ನಿಂತಿದೆ.
ಹಂದಿ ಸಾಕಾಣಿಕೆಯ ಹವ್ಯಾಸವಲ್ಲದಿದ್ದರೂ ಕೂಡ ಸಾಕುವ ಆಸಕ್ತಿಯಿಂದ ಹಂದಿ ಸಾಕಾಣಿಕೆಯನ್ನು ಆರಂಭಿಸಿ ಅದಕ್ಕೆ ಬೇಕಾಗಿರುವ ಶೆಡ್ ನ್ನು ನರೇಗಾ ಯೋಜನೆಯಡಿಯಲ್ಲಿ ನಿಮಿ೯ಸಿದ್ದಾರೆ.
ಕಸದಿಂದ ರಸ ಎಂಬ ಮಾತಿನಂತೆ ನಮ್ಮ ಮನೆಯಲ್ಲೇ ದೊರಕುವ ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸಿ ಬಳಕೆ ಮಾಡಿದರೆ ಅದೆಷ್ಟೋ ಕಸಗಳು ಶೇಖರವಾಗುವುದನ್ನು ತಡೆಯಬಹುದು. ಅಂತೆಯೇ ಸೌದೆ ಒಲೆಯನ್ನು ಹೋಲಿಸಿದರೆ ಅನಿಲದ ಗ್ಯಾಸ್ ಗಳ ಬಳಕೆಯು ಹೆಚ್ಚಾಗಿದೆ. ಹೊಗೆಯಿಂದ ದೂರ ಉಳಿಯಲು ಹಾಗೂ ಬಳಕೆಗೆ ಸುಲಭವಾಗುವಂತೆ ಗ್ಯಾಸ್ ಬಳಕೆ ವಿಶ್ವವ್ಯಾಪಿಯಾಗಿದೆ. ಇನ್ನು ಹೈನುಗಾರಿಕೆ ಮಾಡುವಂತಹ ರೈತರು ದನದ ಹಾಲು ಮಾರಾಟ ಮಾಡಿ ಒಂದಿಷ್ಟು ಲಾಭವನ್ನು ಗಳಿಸುತ್ತಾರೆ. ದನದಿಂದ ಸಿಗುವ ಸೆಗಣಿಯನ್ನು ವ್ಯರ್ಥ ಮಾಡದೆ ಗೊಬ್ಬರ ಗ್ಯಾಸ್ ಘಟಕದಿಂದ ಅಡುಗೆಗೆ ಗ್ಯಾಸ್ ಬಳಕೆ ಮಾಡಬಹುದು. ಹೀಗೆ ಕೇಂದ್ರ ಸರಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಯೋ ಗ್ಯಾಸ್ ಘಟಕ ನಿರ್ಮಾಣ ಮಾಡಿ ಅದರಿಂದ ಗ್ಯಾಸ್ ಬಳಕೆ ಮಾಡಿ ಗ್ರಾಮಕ್ಕೆ ಮಾದರಿಯಾದವರು ರೈಮಂಡ್ ಲೋಬೊ ಅವರು.
ರೈಮಂಡ್ ಅವರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಇವರಿಗಿರುವ ವಿಶೇಷ ಆಸಕ್ತಿ ಎಂದರೆ ಎಲ್ಲಾ ರೀತಿಯ ಕೃಷಿಯನ್ನು ಮಾಡಬೇಕೆಂಬ ಹಂಬಲ. ಆದರೆ ಇವರು ಒಂದಿಂಚು ಜಾಗವನ್ನು ಬಿಡದೆ ಅಡಿಕೆ ಗಿಡಗಳನ್ನು ನೆಟ್ಟಿದ್ದಾರೆ. ಸಣ್ಣ ಪ್ರಮಾಣದ ಹಂದಿ ಸಾಕಾಣಿಕೆ, ಹೈನುಗಾರಿಕೆ ಮಾಡುತ್ತಿದ್ದಾರೆ. ದನಗಳನ್ನು ಸಾಕುತ್ತಿರುವ ಇವರಿಗೆ ಸೆಗಣಿಯಿಂದ ಹಟ್ಟಿಗೊಬ್ಬರವನ್ನು ಮಾಡಿ ಕೃಷಿಗೆ ಬಳಸುತ್ತಿದ್ದರು. ಆದರೆ ಇದರಿಂದ ಗೊಬ್ಬರ ಗ್ಯಾಸ್ ಮಾಡಬಹುದೆಂದು ತಿಳಿದಿದುಕೊಂಡಿದ್ದಾರೆ.
ನರೇಗಾ ಯೋಜನೆಯಡಿ ಬಯೋಗ್ಯಾಸ್ ನಿರ್ಮಾಣಕ್ಕೆ ಇರುವ ಅವಕಾಶವನ್ನು ತಿಳಿದು ಅವರು ಗೊಬರ ಗ್ಯಾಸ್ ನಿರ್ಮಿಸಿ, ಅದರ ಸದ್ಬಳಕೆ ಮಾಡಲು ಮುಂದಾಗಿ 2024-25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಂದಾಜು ಮೊತ್ತ 20 ಸಾವಿರದಲ್ಲಿ ಬಯೋಗ್ಯಾಸ್ ನಿರ್ಮಾಣವನ್ನು ಮಾಡಿದ್ದಾರೆ. ಸಾಮಾಗ್ರಿ ಮೊತ್ತ 9578, ಕೂಲಿ ಮೊತ್ತ 9772 ವನ್ನು ಪಡೆದುಕೊಂಡಿದ್ದಾರೆ.
ಮನೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಮೊದಲಿಗೆ ವೃತ್ತಾಕಾರದ ಟ್ಯಾಂಕ್ ವೊಂದನ್ನು ಕಟ್ಟಿ ಸೆಗಣಿ ಹಾಕಿ ಅದರಿಂದ ಬರುವ ಅನಿಲದ ಪೈಪನ್ನು ಅಡುಗೆ ಕೋಣೆಗೆ ಅಳವಡಿಸಲಾಗಿದೆ. ಸೆಗಣಿ ಶೇಖರಣೆಯಿಂದ ಉತ್ಪತ್ತಿಯಾಗುವ ಅನಿಲವು ಪೈಪ್ ಮೂಲಕ ಅಡುಗೆ ಮನೆಯ ಹೋಗಿ ದಿನನಿತ್ಯ ಅಡುಗೆ ಮಾಡಲು ಸಹಕಾರಿಯಾಗಿದೆ. ಇನ್ನೂ ಟ್ಯಾಂಕ್ ನಿಂದ ಸೆಗಣಿ ನೀರು ಹಾದು ಹೋಗಲು ಪ್ರತ್ಯೇಕ ತೊಟ್ಟಿ ನಿರ್ಮಾಣವನ್ನು ಮಾಡಲಾಗಿದೆ. ಈಗಾಗಲೇ ತಮಗಿರುವ ಜಾಗದಲ್ಲಿ ಕೃಷಿ ಮಾಡುತ್ತಿದ್ದು, ಗೋಬರ್ ಗ್ಯಾಸ್ ಮಾಡಬೇಕು ಎಂಬ ಆಶಯದಂತೆ ಅವರು ಮನೆಯ ಹಿಂಭಾಗದಲ್ಲಿ ಇರುವ ಜಾಗವನ್ನು ಆಯ್ಕೆ ಮಾಡಿ ಗೊಬ್ಬರ ಗುಂಡಿ ನಿರ್ಮಿಸಿದ್ದಾರೆ.
ರೈಮಂಡ್ ಅವರು ತಮ್ಮದೇ ಜಮೀನಿನಲ್ಲಿ ಬೆಳೆಸಿದ ಅಡಿಕೆ ಕೃಷಿ ಹೈನುಗಾರಿಕೆಯಿಂದ ತಮ್ಮ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದರು. ಅಲ್ಲಿದೇ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೂಲಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮನಸಿದ್ದರೆ ಮಾರ್ಗ ಎಂಬಂತೆ ಬಯೋಗ್ಯಾಸ್ ಮಾಡಲು ಸ್ಥಳಾವಕಾಶ ಕಡಿಮೆ ಇದ್ದರೂ ಸೆಗಣಿಯನ್ನು ಸದುಪಯೋಗ ಪಡಿಸುವ ದೃಷ್ಟಿಯಿಂದ ಕಡಿಮೆ ಜಾಗದಲ್ಲಿ ಚೊಕ್ಕ ಬಯೋಗ್ಯಾಸ್ ಎದ್ದು ನಿಂತಿದೆ. ರೈಮಂಡ್ ಅವರು ಎರಡು ದನಗಳನ್ನು ಸಾಕುತ್ತಿದ್ದು, ಅದರಿಂದ ಸಿಗುವ ಸೆಗಣಿಯನ್ನು ಅಡುಗೆ ಅನಿಲಕ್ಕಾಗಿ ಬಳಕೆ ಮಾಡಬೇಕೆಂಬ ಉದ್ದೇಶದಿಂದ ಸೆಗಣಿಯನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಆರಂಭಿಸುತ್ತಾರೆ. ಮೊದಲು ಹಟ್ಟಿ ಗೊಬ್ಬರವನ್ನು ಮಾಡುತ್ತಿದ್ದ ಇವರು ಈಗ ಸೆಗಣಿಯನ್ನು ಬಯೋಗ್ಯಾಸ್ ಗೆ ಬಳಸುತ್ತಿದ್ದಾರೆ.
--------------------
ನರೇಗಾ ಯೋಜನೆಯಿಂದ ಬಯೋ ಗ್ಯಾಸ್ ನಮ್ಮ ಮನೆಯ ಹಿಂದೆ ನಿರ್ಮಿಸಲು ಸಹಾಯಧನ ಸಿಕ್ಕಿದೆ. ಖರ್ಚು ಹೆಚ್ಚಾಗಿದ್ದರು ನರೇಗಾ ಯೋಜನೆಯಿಂದ ಸಿಕ್ಕಿರುವ ಅನುದಾನದಿಂದ ಸ್ವಲ್ಪಮಟ್ಟಿಗೆ ಸಹಾಯವಾಗಿದೆ. ಕೃಷಿಕರಿಗೆ ಇದೊಂದು ಉತ್ತಮ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ.
_ರೇಮಂಡ್ ಲೋಬೋ, ನರೇಗಾ ಫಲಾನುಭವಿ.
----------------



0 Comments