ಮೂಡುಬಿದಿರೆ ಕುಲಾಲ ಸಂಘದ 19ನೇ ವಾರ್ಷಿಕ ಮಹಾಸಭೆ
*ಸಶಕ್ತರು ಅಶಕ್ತರಿಗೆ ನೆರವು ನೀಡಬೇಕು : ಧನಂಜಯ ಕುಲಾಲ್
ಮೂಡುಬಿದಿರೆ : ಸಂಘ ಬೆಳೆದಷ್ಟು ಸಮುದಾಯವು ಕೂಡ ಅಭಿವೃದ್ಧಿಯತ್ತ ಸಾಗುತ್ತದೆ. ಸಂಘದಲ್ಲಿರುವ ಸಶಕ್ತರು, ಸಮುದಾಯದಲ್ಲಿರುವ ಅಶಕ್ತರಿಗೆ ನೆರವು ನೀಡುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಧನಂಜಯ ಕುಲಾಲ್ ಹೇಳಿದರು.
ಅವರು ಮೂಡುಬಿದಿರೆ ಕುಲಾಲ ಸಂಘದ ವತಿಯಿಂದ ಸಂಘದ 19ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ-ಸನ್ಮಾನ ಕಾರ್ಯಕ್ರಮವನ್ನು ಸಮಾಜ ಮಂದಿರದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಮೂಡುಬಿದಿರೆ ಕುಲಾಲ ಸಂಘವು ಉತ್ತಮ ಕೆಲಸಗಳನ್ನು ಮಾಡುತ್ತಿರುವುದು ಗಮನಾರ್ಹ. ಕುಲಾಲ ಭವನ ಕನಸು ಕೂಡ ಸಂಘದ ಮುಂದಿದೆ. ಅದಕ್ಕೆ ಧರ್ಮಸ್ಥಳ ಕ್ಷೇತ್ರದಿಂದಲೂ ನೆರವು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಯೆನಪೋಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವೈದ್ಯ ಡಾ.ಬಾಲಕೃಷ್ಣ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘಟನೆ ಎನ್ನುವುದು ವ್ಯಕ್ತಿ ಅಥವಾ ಕೆಲವರಿಗೆ ಮಾತ್ರ ಸಿಮೀತವಾಗಬಾರದು. ಸಂಘಟನೆಯ ಉದ್ದೇಶ ವಾರ್ಷಿಕೋತ್ಸವ ಆಯೋಜಿಸುವುದು ಮಾತ್ರವಲ್ಲ, ಸಮುದಾಯ ಪರಂಪರೆಯನ್ನು ಉಳಿಸಿ, ಬೆಳೆಸುವ ಪ್ರಯತ್ನವಾಗಬೇಕು. ಸಮುದಾಯದ ಸರ್ವರ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಸಂಘದ ಅಧ್ಯಕ್ಷ ಸತೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಪ್ರತಿಭಾನ್ವಿತ ವಿದ್ಯಾರ್ಥಿನಿ ಮಾನ್ಯ ಹಾಗೂ ಅನುಕ್ಷಿತಾ ಅವರನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.92 ಅಂಕಗಳ ಸಾಧನೆ ಮಾಡಿದ ತಿಲಕ್ ಕುಲಾಲ್, ಮಂಗಳೂರು ವಿವಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಕಾರ್ಯದರ್ಶಿಯಾಗಿ ಚುನಾಯಿತರಾದ ಧನುಷ್ ಕುಲಾಲ್, ಬಹುಮುಖ ಪ್ರತಿಭೆಗಳಾದ ವರ್ಷಿಣಿ ಕುಲಾಲ್, ಸ್ವಪ್ನಾ ಸದಾಶಿವ ಮೂಲ್ಯ ಹಾಗೂ ಭಜನೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿನಕರ್ ಕುಲಾಲ್ ಅವರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವೇತನದೊಂದಿಗೆ ವೇತನ ನೀಡಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಮಯೂರ್ ಕುಲಾಲ್ ಅವರನ್ನು ಗೌರವಿಸಲಾಯಿತು.
ಶ್ರೀನಿವಾಸ ಬಂಗೇರ ಮುಖ್ಯ ಅತಿಥಿಯಾಗಿದ್ದರು. ಸಂಘದ ಸ್ಥಾಪಕಾಧ್ಯಕ್ಷ ಸುಬ್ಬಯ್ಯ ಬಂಗೇರ, ಗೌರವಾಧ್ಯಕ್ಷರಾದ ಶಂಕರ ಕುಲಾಲ್, ಸುಂದರ ಕುಲಾಲ್, ಕುಲಾಲ್ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಎ. ಬಂಗೇರ ಲಾಡಿ ಉಪಸ್ಥಿತರಿದ್ದರು.
ಆಶಾ ಉಮೇಶ್ ಕುಲಾಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೆ. ವರದಿ ವಾಚಿಸಿದರು. ಕೋಶಾಧಿಕಾರಿ ಕಿರಣ್ ಕುಲಾಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೆರ‍್ದ ಗೊಬ್ಬು ಕ್ರೀಡೆಯಲ್ಲಿ ವಿಜೇತರಾದವರ ವಿವರನ್ನು ವಿಜಯ್ ಕುಲಾಲ್ ವಾಚಿಸಿದರು. ಸೀತಾರಾಮ ಕುಲಾಲ್ ವಿದ್ಯಾರ್ಥಿಗಳ ವಿವರ ನೀಡಿದರು. ಸೌಮ್ಯ ಸದಾಶಿವ, ಮಮತಾ ಕುಲಾಲ್ ಸನ್ಮಾನಿತರ ವಿವರ ನೀಡಿದರು. ಗಾಯತ್ರಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ವಿಕಾಸ್ ಕುಲಾಲ್ ವಂದಿಸಿದರು.





0 Comments