ನದಿ, ಸಮುದ್ರ ತೀರಗಳಲ್ಲಿ ಸೆಲ್ಫೀ ಹುಚ್ಚು ಬೇಡ : ಈಶ್ವರ್ ಮಲ್ಪೆ

ಜಾಹೀರಾತು/Advertisment
ಜಾಹೀರಾತು/Advertisment

 ನದಿ, ಸಮುದ್ರ ತೀರಗಳಲ್ಲಿ  ಸೆಲ್ಫೀ ಹುಚ್ಚು ಬೇಡ : ಈಶ್ವರ್ ಮಲ್ಪೆ

ಮೂಡುಬಿದಿರೆ: ನದಿ ಮತ್ತು ಸಮುದ್ರ ತೀರಗಳಲ್ಲಿ ಜನರ ಸೆಲ್ಫಿ ಹುಚ್ಚಿನಿಂದಾಗಿ ಹೆಚ್ಚಿನ ಅವಘಡಗಳು ಸಂಭವಿಸುತ್ತಿವೆ. ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದುಸ್ಸಾಹಸಕ್ಕೆ ಯಾರೂ ಮುಂದಾಗಬಾರದು ಎಂದು ಖ್ಯಾತ ಸಮಾಜ ಸೇವಕ, ಮುಳುಗು ತಜ್ಞ ಈಶ್ವರ್ ಮಲ್ಪೆ ಎಚ್ಚರಿಸಿದರು.


ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆಯಾದ ಸ್ಪಟಿಕ ಫೋರಂನ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿಯ ಮಳೆಗಾಲದಲ್ಲಿ ಒಟ್ಟು 50ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಸಂದರ್ಭದಲ್ಲಿ ಕೇವಲ ಐವರನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು. ತಮ್ಮ ಜೀವನದ ವೃತ್ತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, "ತಾನು ಬಾಲ್ಯದಲ್ಲಿ ಸೇನೆಗೆ ಸೇರಬೇಕೆಂದು ಕನಸು ಕಂಡಿದ್ದೆ, ಆದರೆ ಬಡತನದಿಂದಾಗಿ ವಿದ್ಯಾಭ್ಯಾಸ ಪಡೆಯಲು ಆಗಲಿಲ್ಲ. ಆದರೂ ಇಂದು ಇಷ್ಟದ ಈಜು ಕಲೆಯನ್ನು ಕರಗತ ಮಾಡಿಕೊಂಡು ಸಮಾಜಕ್ಕೆ ಕೈಲಾದಷ್ಟು ಸೇವೆ ಸಲ್ಲಿಸುತ್ತಿದ್ದೇನೆ. ನದಿ ಹಾಗೂ ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಗುವವರನ್ನು ರಕ್ಷಿಸುವುದೇ ನನ್ನ ಕಾಯಕ. ಅದರಲ್ಲಿಯೇ ನನಗೆ ಆತ್ಮತೃಪ್ತಿ ಸಿಗುತ್ತಿದೆ" ಎಂದು ಹೇಳಿದರು.


ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಾಜಕಾರ್ಯ ವಿಭಾಗದ ಮೂಲಕ ಸಮಾಜ ಸೇವೆಗೆ ಹೆಚ್ಚಿನ ಅವಕಾಶಗಳಿವೆ. ವಿದ್ಯಾರ್ಥಿಗಳು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜಕ್ಕೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.


ಸರಕಾರಿ ಪ್ರೌಢಶಾಲೆ ನಿರ್ಕರೆ ಹಾಗೂ ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ, ಆಳ್ವಾಸ್ ಸಮಾಜಕಾರ್ಯ ವಿಭಾಗದ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಜಪಾನಿನಲ್ಲಿ ಉದ್ಯೋಗದಲ್ಲಿರುವ ಪುನೀತ ಕೊಡುಗೆ ನೀಡಿದ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.



ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲಾ ಕೆ., ಸ್ಪಟಿಕ ಫೋರಂ ಸಂಯೋಜಕ ಸುಧೀಂದ್ರ ಜೆ. ಶಾಂತಿ, ನಯೋಮಿ ರಿಯೋನಾ ಮೋರಾಸ್, ವೇದಿಕೆಯ ಸಂಯೋಜಕರಾದ ಅಬ್ದುಲ್ ರಹ್ಮಾನ್, ಇನ್ಷಾ ಉಪಸ್ಥಿತರಿದ್ದರು.

 

ಸುರಕ್ಷಾ ಹಾಗೂ ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಗಗನ ಶರ್ಮ ಸ್ವಾಗತಿಸಿ, ಅನನ್ಯ ಅತಿಥಿಯನ್ನು ಪರಿಚಯಿಸಿದರು.

Post a Comment

0 Comments