ಉಗ್ರ ಸಂಚು - ಮನೋವೈದ್ಯ, ಎಎಸ್‌ಐ ಸೇರಿದಂತೆ ಮೂವರ ಸೆರೆ

ಜಾಹೀರಾತು/Advertisment
ಜಾಹೀರಾತು/Advertisment

 ಉಗ್ರ ಸಂಚು - ಮನೋವೈದ್ಯ, ಎಎಸ್‌ಐ ಸೇರಿದಂತೆ ಮೂವರ ಸೆರೆ 

ಬೆಂಗಳೂರು, ಕೋಲಾರದದಲ್ಲಿ ಶೋಧ ನಡೆಸಿದ್ದ ಎನ್‌ಐಎ

ಬೆಂಗಳೂರು : ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣ ಸಂಬಂಧ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಪ್ರಮುಖ ಆರೋಪಿಗಳಾದ ಮನೋ ವೈದ್ಯ, ಪೊಲೀಸ್‌ ಅಧಿಕಾರಿ ಸಹಿತ ಮೂವರನ್ನು ಬಂಧಿಸಿದೆ. ಜು. 8ರಂದು ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳಲ್ಲಿ ಶೋಧ ನಡೆಸಿದ ಎನ್‌ಐಎ ಬೆಂಗಳೂರು ಪರಪ್ಪನ ಅಗ್ರಹಾರದ ಮನೋವೈದ್ಯ ಡಾ. ನಾಗರಾಜ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಾನ್ ಪಾಷಾ ಮತ್ತು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಅಹಮ್ಮದ್‌ನ ತಾಯಿ ಅನೀಸ್ ಫಾತಿಮಾರನ್ನು ಬಂಧಿಸಲಾಗಿದೆ.


ಬಂಧಿತ ಆರೋಪಿಗಳಿಂದ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್‌ ಇ ತಯ್ಬಾ (ಎಲ್‌ಇಟಿ)ಯ ಅಜೆಂಡಾವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಇವರು ಸಂಚು ರೂಪಿಸುತ್ತಿದ್ದರು. ಆರೋಪಿಗಳಿಂದ ಎರಡು ವಾಕಿ-ಟಾಕಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕ ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.


ಬೆಂಗಳೂರಿನ ನಾಗನಾಥಪುರದಲ್ಲಿರುವ ಡಾ. ನಾಗರಾಜ್ ಮನೆ, ಸಿಎಆರ್ ಉತ್ತರ ವಿಭಾಗದಲ್ಲಿರುವ ಚಾನ್‌ಪಾಷಾ ವಾಸವಾಗಿರುವ ಕ್ವಾಟ್ರಸ್, ಕೋಲಾರದಲ್ಲಿರುವ ಮನೆ, ಆರ್.ಟಿ. ನಗರದಲ್ಲಿರುವ ಜುನೈದ್ ಅಹ್ಮದ್ ಮನೆ, ವೈದ್ಯ ನಾಗರಾಜ್‌ ಗೆ ಸಹಾಯಕಿಯಾಗಿದ್ದ ಪವಿತ್ರಾ ಎಂಬಾಕೆಯ ಮನೆಗೆ ಎನ್‌ಐಎ ತಂಡ ದಾಳಿ ನಡೆಸಿದೆ. 

ನಾಗರಾಜ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮನೋವೈದ್ಯನಾಗಿ ಹೆಚ್ಚುವರಿ ಕೆಲಸ ಮಾಡುತ್ತಿದ್ದ. ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎಲ್‌ಇಟಿಯ ದಕ್ಷಿಣ ಭಾರತದ ಮುಖ್ಯಸ್ಥ ಟಿ. ನಾಸೀರ್ ಮತ್ತು ಇತರ ಕೈದಿಗಳಿಗೆ ಮೊಬೈಲ್‌ ನೀಡುತ್ತಿದ್ದ. ಈತನಿಗೆ ಪವಿತ್ರಾ ಸಹಾಯ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. 

ಜುನೈದ್ ಅಹ್ಮದ್‌ನ ತಾಯಿ ಅನೀಸ್ ಫಾತೀಮಾ, ಜೈಲಿನಲ್ಲಿರುವ ಟಿ. ನಾಸೀರ್ ಎಲ್‌ಇಟಿಗೆ ಸಂಘಟನೆ ಮಾಡಲು ನಿಧಿ ಸಂಗ್ರಹ ಹಾಗೂ ಇನ್ನಿತರ ವಿಷಯಗಳ ಬಗ್ಗೆ ನೀಡುತ್ತಿದ್ದ ಮಾಹಿತಿಯನ್ನು ವಿದೇಶದಲ್ಲಿರುವ ತನ್ನ ಮಗನಿಗೆ ನೀಡುತ್ತಿದ್ದಳು ಎಂದು ತಿಳಿದುಬಂದಿದೆ. ಅದರಂತೆ ಆತ ವಿಧ್ವಂಸಕ ಕೃತ್ಯಗಳಿಗೆ ಸಂಚು ಹಾಗೂ ಸಂಘಟನೆಗಾಗಿ ನಿಧಿ ಸಂಗ್ರಹಿಸುವ ಕೆಲಸದಲ್ಲಿ ಭಾಗಿಯಾಗುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಮತ್ತೂಬ್ಬ ಶಂಕಿತ ಸಿಎಆರ್‌ನ ಎಎಸ್‌ಐ ಚಾನ್‌ ಪಾಷಾ, 2022ರಿಂದ ಟಿ. ನಾಸೀರ್ ಪರವಾಗಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣ ಸಂಬಂಧ ಆಗಾಗ ಬೆಂಗಳೂರು, ಕೇರಳ ಹಾಗೂ ಇತರ ರಾಜ್ಯಗಳ ಕೋರ್ಟ್‌ಗೆ ಕರೆದೊಯ್ಯುವ ಮಾಹಿತಿಯನ್ನು ಸಂಘಟನೆಯ ಕೆಲವು ವ್ಯಕ್ತಿಗಳು ಹಾಗೂ ಮುಂಚಿತವಾಗಿ ಟಿ. ನಾಸೀರ್‌ಗೂ ನೀಡುತ್ತಿದ್ದ. ಅದಕ್ಕಾಗಿ ಸಂಘಟನೆಯಿಂದ ಹಣ ಪಡೆಯುತ್ತಿದ್ದ ಎಂದು ಎನ್‌ಐಎ ತಿಳಿಸಿವೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹ್ಮದ್ ಸೇರಿ 9 ಮಂದಿ ಶಂಕಿತರ ವಿರುದ್ಧ ಆರೋಪಪಟ್ಟಿಯನ್ನು ಎನ್‌ಐಎ ಕೋರ್ಟ್‌ಗೆ ಸಲ್ಲಿಸಿದೆ.


ಬೆಂಗಳೂರು, ಉತ್ತರ ಕರ್ನಾಟಕ ಸೇರಿ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಗ್ರೆನೇಡ್, ಮದ್ದು ಗುಂಡುಗಳು, ಪಿಸ್ತೂಲ್, ಜೀವಂತ ಗುಂಡುಗಳನ್ನು ಸಂಗ್ರಹಿಸಿದ್ದ ಆರೋಪದ ಮೇರೆಗೆ ವಿವಿಧೆಡೆ 2023ರ ಜು. 18ರಂದು ದಾಳಿ ನಡೆಸಲಾಗಿತ್ತು. ಈ ವೇಳೆ ಸೈಯದ್ ಸುಹೈಲ್ ಖಾನ್ (24), ಕೊಡಿಗೇಹಳ್ಳಿಯ ನಿವಾಸಿ 4ನೇ ಆರೋಪಿ ಮಹಮದ್ ಉಮರ್ (29), 5ನೇ ಆರೋಪಿ ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್ (25), 6ನೇ ಆರೋಪಿ ಸೈಯದ್ ಮುದಾಸಿರ್ ಪಾಷಾ (28), ಮಹಮ್ಮದ್ ಫೈಸಲ್ (30) ಸಿಸಿಬಿಯಿಂದ ಬಂಧನಕ್ಕೊಳಗಾದ ಆರೋಪಿಗಳಾಗಿದ್ದರು. ಶಂಕಿತರಿಂದ ವಿವಿಧ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು. ತಲೆಮರೆಸಿಕೊಂಡಿರುವವರ ಪತ್ತೆಗೆ ಪ್ರಯತ್ನಗಳು ಮುಂದುವರಿದಿವೆ.

Post a Comment

0 Comments