ಸೌಹಾರ್ದತೆಯೊಂದಿಗೆ ನಡೆದ ಗುಂಡುಕಲ್ಲು ಮಸೀದಿ ಚುನಾವಣೆ

ಜಾಹೀರಾತು/Advertisment
ಜಾಹೀರಾತು/Advertisment

 ಸೌಹಾರ್ದತೆಯೊಂದಿಗೆ ನಡೆದ ಗುಂಡುಕಲ್ಲು ಮಸೀದಿ ಚುನಾವಣೆ

ಮೂಡುಬಿದಿರೆ: ಪಡುಮಾರ್ನಾಡು ಗುಂಡುಕಲ್ಲು ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಕಳೆದ ಕೆಲವು  ಸಮಯಗಳಿಂದ ಸುನ್ನೀ ಸಂಘಟನೆಯ ಎರಡು ವಿಭಾಗಗಳ ಮಧ್ಯೆ ಭಿನ್ನಮತದಿಂದಾಗಿ  ಮುಂದೂಡಿದ್ದ ಚುನಾವಣೆಯು   ಎರಡೂ ವಿಭಾಗಗಳ ಸೌಹಾರ್ದ ಮಾತುಕತೆಯಿಂದ  ಸೋಮವಾರ ಶಾಂತಿಯುತವಾಗಿ ನಡೆಯಿತು.

ಘಟನೆಯ ಹಿನ್ನೆಲೆ: ಈ ಮಸೀದಿಯಲ್ಲಿ ಹಿಂದಿನಿಂದಲೂ ಇ.ಕೆ.ವಿಭಾಗದ ಪಠ್ಯಕ್ರಮ ಸಿಲೆಬಸ್ ಹಾಗೂ ಇ.ಕೆ.ವಿಭಾಗದ ಜಮಾಅತ್ ಹೆಚ್ಚಿರುವುದರಿಂದ ಇನ್ನೊಂದು ವಿಭಾಗ ಮಸೀದಿ ಆಡಳಿತ ಸಮಿತಿಯನ್ನು ವಶಪಡಿಸಲು ಮುಂದಾಗಿತ್ತು. ದ.ಕ ಜಿಲ್ಲಾ ವಕ್ಫ್ ಸಮಿತಿಯ ಮಧ್ಯಸ್ಥಿಕೆಯನ್ನು ಕೋರಿತ್ತು.


  ಜಿಲ್ಲಾ ವಕ್ಫ್ ಗುಂಡುಕಲ್ಲು ಜಮಾಅತ್ ಆಡಳಿತ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಆಡಳಿತಾಧಿಕಾರಿಯನ್ನಾಗಿ ಬೆಳ್ತಂಗಡಿಯ ಮಹಮ್ಮದ್ ರಫೀ ಎಂಬುವರನ್ನು ನೇಮಕ ಮಾಡಿ ಚುನಾವಣೆಗೆ ಸಂಬಂಧಿಸಿದಂತೆ ಪಟ್ಟಿ ತಯಾರಿಸಿ, ಅಂತಿಮ ಪಟ್ಟಿಯಲ್ಲಿ ಗುಂಡುಕಲ್ಲು ಜಮಾಅತಿಗೆ ಸಂಬಂಧಪಟ್ಟ ಜಮಾಅತಿನ 30 ಮಂದಿ ಸದಸ್ಯರನ್ನು ಆಡಳಿತಾಧಿಕಾರಿ ಕೈಬಿಟ್ಟು ಪರಿಷ್ಕೃತ ಪಟ್ಟಿ ತಯಾರಿಸಿ ಮತದಾನದ ಹಕ್ಕನ್ನು ಕಸಿಯುವಂತೆ ಮಾಡಿದ್ದರು. ತದ ನಂತರ ಚುನಾವಣಾಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸುವಂತೆ  ಆದೇಶ ಮಾಡಿತ್ತು. ಜಮಾಅತಿನ 30 ಮಂದಿಯನ್ನು ಕೈ ಬಿಟ್ಟ ಬಗ್ಗೆ ಚುನಾವಣಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಗಮನಕ್ಕೂ ತಂದಿದ್ದರು. ಆದರೂ ಚುನಾವಣೆ ನಡೆಸುವಂತೆ ವಕ್ಫ್ ಆದೇಶಿಸಿತ್ತು ಈ ಬಗ್ಗೆ ನೊಂದವರು ತಮಗಾದ ಅನ್ಯಾಯದ ಬಗ್ಗೆ ಕಾನೂನು ಹೋರಾಟ ನಡೆಸಿದ್ದರು.

ಈ ಬಗ್ಗೆ ಮೊಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಹೈಕೋಟ್ ೯ ಮೆಟ್ಟಿಲೇರಿತ್ತು. ನ್ಯಾಯಾಲಯವು ಕಳೆದ ಫೆಬ್ರವರಿ ತಿಂಗಳಲ್ಲಿ ಚುನಾವಣೆ ನಡೆಸಲು ದಿನಾಂಕ ಪ್ರಕಟಿಸಿತ್ತು. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯಿಂದಾಗಿ ಚುನಾವಣೆ ನಡೆದಿರುವುದಿಲ್ಲ. ಆದರೆ ಇತ್ತೀಚೆಗೆ ಜಮಾಅತಿನ ನೊಂದ 30 ಮಂದಿ ಸಂಬಂಧಪಟ್ಟವರಿಗೆ ದೂರು ನೀಡಿ ತಮ್ಮ ಮತದಾನದ ಹಕ್ಕನ್ನು ಪ್ರಶ್ನಿಸಿದ್ದರು.

 

ಆದರೆ ಮೂಡುಬಿದಿರೆ ತಹಶೀಲ್ದಾರರು ದ.ಕ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಡಳಿತ ಸಮಿತಿ ಸದಸ್ಯರ ಮಧ್ಯೆ ಭಿನ್ನಾಪ್ರಾಯ ಇರುವುದರಿಂದ ಸ್ಥಳದಲ್ಲಿ ಶಾಂತಿಭಂಗ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದು ಎಂದು ಮತ್ತೊಮ್ಮೆ ಚುನಾವಣೆಯನ್ನು ಮುಂದೂಡುವಂತೆ ಜಿಲ್ಲಾ ವಕ್ಫ್ ಸಮಿತಿಗೆ ಆದೇಶಿಸಿತ್ತು. ಈ ಜಿಲ್ಲಾ ವಕ್ಫ್ ಸಮಿತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿತ್ತು.


 ಜಿಲ್ಲಾ ವಕ್ಫ್  ಸಮಿತಿಯು ಸೋಮವಾರ ಚುನಾವಣೆ ನಡೆಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ಸದಸ್ಯರು ಬೆಳಿಗ್ಗೆಯೇ ಮಸೀದಿಯಲ್ಲಿ ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮೊದಲಿಗೆ ಒಂದು ವಿಭಾಗದ ಸದಸ್ಯರು ಮತದಾನ ಮಾಡುವುದು ಬೇಡವೆಂದು ನಿರ್ಧರಿಸಿದ್ದರು. ಅಲ್ಲದೆ ಜಮಾಅತಿನಿಂದ ತಮ್ಮ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಪ್ರಶ್ನಿಸಿದ್ದರು. ಆದರೆ ನಂತರ ಎರಡೂ ವಿಭಾಗಗಳ ಮುಖಂಡರು ಮಾತುಕತೆ ನಡೆಸಿ ಸದಸ್ಯರ ಅನುಮತಿಯನ್ನು ಪಡೆದು ಸೌಹಾರ್ದ ಶಾಂತಿಯುತ ಮತದಾನ ಮಾಡುವ ಬಗ್ಗೆ ತೀರ್ಮಾನಕ್ಕೆ ಬಂದರು ಆದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತ ಮತದಾನ ನಡೆಯಿತು.


   ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಅವರು ಎರಡೂ ವಿಭಾಗಗಳ ಮುಖಂಡರು ಮತ್ತು ಸದಸ್ಯರ ಜತೆ ಹಿಂದಿನ ದಿನವೇ ಮಾತುಕತೆ ನಡೆಸಿ ಶಾಂತಿಯುತ ಮತದಾನ ನಡೆಸುವಂತೆ ಸಲಹೆ ನೀಡಿದ್ದರು.

 ಉಪನಿರೀಕ್ಷಕ ಕೃಷ್ಣಪ್ಪ ಅವರು ಈ ಸಂದರ್ಭದಲ್ಲಿದ್ದರು.

Post a Comment

0 Comments