ಕನಕದಾಸರ ಕೀರ್ತನೆ ಮತ್ತು ಕಾವ್ಯಗಳು ಸರಳವಾಗಿವೆ : ಮುನಿರಾಜ ರೆಂಜಾಳ
ಮೂಡುಬಿದಿರೆ: ಕನಕದಾಸರ ಕೀರ್ತನೆ ಮತ್ತು ಕಾವ್ಯಗಳು ಜನಸಾಮಾನ್ಯರಿಗೂ ತಲುಪಬಲ್ಲಷ್ಟು ಸರಳವಾಗಿವೆ. ನವರಸಗಳಿಂದ ಕೃತಿಗಳಲ್ಲಿ ರಸಘಟ್ಟಗಳು ತುಂಬಿಕೊಂಡಿದ್ದು ಶುದ್ಧ ಸಾಹಿತ್ಯಕ ಕೃತಿಗಳಾಗಿ ಅವರ ರಚನೆಗಳನ್ನು ಓದಿ ಆಸ್ವಾದಿಸಬೇಕು ಎಂದು ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.
ಅವರು ಮಂಗಳವಾರ
ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಶ್ರೀ ಧವಲಾ ಕಾಲೇಜು ಮೂಡುಬಿದಿರೆ ಇವುಗಳ ಸಹಯೋಗದೊಂದಿಗೆ ನಡೆದ 2024 -25 ನೇ ಸಾಲಿನ ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ ಮಾಲಿಕೆಯ ಉದ್ಘಾಟನೆ ನೆರವೇರಿಸಿ 'ಕನಕದಾಸರ ಕಾವ್ಯ : ರಸ ವಿನ್ಯಾಸ' ಎಂಬ ವಿಷಯದ ಉಪನ್ಯಾಸ ನೀಡಿದರು.
'ಬಾಗಿಲನು ತೆರೆದು' ಎಂಬ ಒಂದು ಕೀರ್ತನೆಯಲ್ಲಿಯೇ ಶೃಂಗಾರ, ಹಾಸ್ಯ, ಕರುಣ, ವೀರ, ಅದ್ಭುತ ರಸಗಳು ಕೂಡಿಕೊಂಡು ಅಪೂರ್ವವಾಗಿದೆ. ಮೋಹನ ತರಂಗಿಣಿ, ನಳಚರಿತ್ರೆಯಲ್ಲಿ ಶೃಂಗಾರ ರಸ, ಡೊಂಕು ಬಾಲದ ನಾಯಕರೇ, ಎಲ್ಲರೂ ಮಾಡುವುದು ಹೊಟ್ಟೆಗಾಗಿ ಕೀರ್ತನೆಗಳಲ್ಲಿ ಹಾಗೂ ರಾಮಧಾನ್ಯ ಚರಿತೆಯಲ್ಲಿ ಹಾಸ್ಯ ರಸ, ಕಾರ್ಕೋಟಕ ಪ್ರಸಂಗದಲ್ಲಿ ಭೀಭತ್ಸ,ಹರಿಭಕ್ತಿಸಾರದಲ್ಲಿ ಅದ್ಭುತ ರಸ, ಕೀರ್ತನೆಗಳ ಶೂರ್ಪನಖಿ, ಪೂತನಿ, ನರಕಾಸುರ ಮೊದಲಾದ ಪಾತ್ರಗಳ ನಿರೂಪಣೆಯಲ್ಲಿ ರೌದ್ರ ರಸವೂ ತುಂಬಿಕೊಂಡಿದೆ ಎಂದರು.
ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಮಾತನಾಡಿ ವಚನ ಮತ್ತು ಕೀರ್ತನ ಸಾಹಿತ್ಯ ಕನ್ನಡ ಸಾಹಿತ್ಯದ ಸುವರ್ಣಾಧ್ಯಾಯಗಳಾಗಿದ್ದು ಜೀವನತತ್ತ್ವ ಆದರ್ಶಗಳನ್ನು ಸರಳವಾದ ಕಾವ್ಯಾತ್ಮಕ ಧಾಟಿಯಲ್ಲಿ ಮಂಡಿಸಿದರು. ಕನಕದಾಸರು ಹರಿದಾಸ ಚಳುವಳಿಯಲ್ಲಿ ಕವಿಯಾಗಿ ಗುರುತಿಸಿಕೊಂಡವರು. ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಗುರುಗಳ ಪ್ರಶ್ನೆಗೆ ' ನಾನು' ಹೋದರೆ ಹೋಗಬಹುದು ಎಂದು ಉತ್ತರಿಸಿ ಅಹಂ ನಿರಸನವೇ ಮಹತ್ತಿಗೆ ದಾರಿ ಎಂಬುದನ್ನು ಮಾರ್ಮಿಕವಾಗಿ ಹೇಳಿದವರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಾರ್ಶ್ವನಾಥ ಅಜ್ರಿ ವಹಿಸಿ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ ಎಂದರು.
ಶ್ರೀಧವಲಾ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಮಲ್ಲಿಕಾ ರಾವ್ ಸ್ವಾಗತಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ವಂದಿಸಿದರು. ವೀಕ್ಷಿತಾ ನಿರೂಪಿಸಿದರು.
0 Comments