ಬೆಳುವಾಯಿ ಗ್ರಾಮಸಭೆ
ಕೈಗೆಟುಕುತ್ತಿರುವ ಅಪಾಯಕಾರಿ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಲು ಆಗ್ರಹ, ರಾ.ಹೆ.ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರ ಆಕ್ರೋಶ
ಮೂಡುಬಿದಿರೆ : ಬೆಳುವಾಯಿ ಗ್ರಾ.ಪಂ.ವ್ಯಾಪ್ತಿಯ ಚಚ್೯ ಶಾಲೆ ಬಳಿ ಇರುವ ಟ್ರಾನ್ಸ್ ಫಾರ್ಮರ್ ನ ತಂತಿಗಳು ಕೈಗೆಟುಕುತ್ತಿದ್ದು ಇದರಿಂದ ಮಕ್ಕಳಿಗೆ ಅನಾಹುತವಾಗಬಹುದು ಇದನ್ನು ತಕ್ಷಣ ಸ್ಥಳಾಂತರಿಸುವಂತೆ ಆಶಾ ಕಾರ್ಯಕರ್ತೆ ಪ್ರೇಮಾ ಸಹಿತ ಗ್ರಾಮಸ್ಥರು ಆಗ್ರಹಿಸಿದರು.
ಅವರು ಬೆಳುವಾಯಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂಗಳವಾರ ಪಂಚಾಯತ್ ಸಭಾ ಭವನದಲ್ಲಿ ನಡೆದ ಪ್ರಥಮ ಸುತ್ತಿನ ಗ್ರಾಮ ಸಭೆಯಲ್ಲಿ ಸಮಸ್ಯೆಯನ್ನು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು
ರಾ.ಹೆ.ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ರಸ್ತೆಯನ್ನು ಏರಿಸಲಾಗಿದ್ದು ಇದರಿಂದಾಗಿ ರಸ್ತೆಯ ಇಕ್ಕೆಲದಲ್ಲಿರುವ ಟ್ರಾನ್ಸ್ ಫಾರ್ಮರ್ ನ ತಂತಿಗಳು ಈಗ ಕೈಗೆಟುಕುವಂತಿದ್ದು, ಶಾಲಾ ಮಕ್ಕಳು ಇದನ್ನು ಮುಟ್ಟಿದರೆ ಅಪಾಯವಾಗಬಹುದು ಆದ್ದರಿಂದ ತುರ್ತಾಗಿ ಇದನ್ನು ಸ್ಥಳಾಂತರಿಸುವುದು ಅವಶ್ಯಕ ಎಂದು ಪಿಡಿಓ ಭೀಮ ನಾಯಕ್ ಬಿ.ಅವರೂ ಅಧಿಕಾರಿಗಳ ಗಮನಕ್ಕೆ ತಂದರು. ಮೆಸ್ಕಾಂ ಅಧಿಕಾರಿ ಅವರು ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸುವ ಭರವಸೆಯನ್ನು ನೀಡಿದರು.
ರಾ.ಹೆದ್ದಾರಿಯ ಕಳಪೆ ಕಾಮಗಾರಿ, ಅಸಮರ್ಪಕ ಚರಂಡಿ ವ್ಯವಸ್ಥೆ, ಅಂಗಡಿಗಳನ್ನು ಅರ್ಧ ತೆರವುಗೊಳಿಸಿ ಇನ್ನುಳಿದ ಅರ್ಧಭಾಗವನ್ನು ಪಂಚಾಯತ್ ಗೆ ತೆರವು ಮಾಡಲು ಹೇಳಿರುವ ಬಗ್ಗೆ, ಕೆಲವರಿಗೆ ಅರ್ಧವಷ್ಟೇ ಪರಿಹಾರವನ್ನು ನೀಡಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ರಾ.ಹೆ.ಯ ಪರವಾಗಿ ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಸಿಬಂಧಿಯನ್ನು ಪಂಚಾಯತ್ ಸದಸ್ಯರಾದ ಸೂರಜ್ ಆಳ್ವ, ಸಾಬಾಜ್ ಅಹಮ್ಮದ್ ಮತ್ತು ಭರತ್ ಶೆಟ್ಟಿ ತರಾಟೆಗೆ ತೆಗೆದುಕೊಂಡರು.
ರಾ.ಹೆ.ಇಲಾಖೆಯು ಅರ್ಧ ಅಂಗಡಿಗಳನ್ನು ತೆರವುಗೊಳಿಸಿರುವುದರಿಂದ ಅದಕ್ಕೆ ಲೈಸನ್ಸ್ ಹೇಗೆ ಕೊಡುವುದೆಂದು ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ ಕಾಮಗಾರಿ ಸಂದರ್ಭ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಹೋಗಿದ್ದು ಇದನ್ನು ಡಿಬಿಲ್ ಕಾಂಟ್ರಕ್ಟ್ ದಾರರು ರಿಪೇರಿ ಮಾಡಿ ಕೊಟ್ಟಿಲ್ಲ ಇದರಿಂದಾಗಿ ಜನರಿಗೆ ನೀರಿನ ಸಮಸ್ಯೆ ಉಂಟಾಗಿದೆಯೆಂದು ಗಮನಕ್ಕೆ ತಂದರು.
ತಮ್ಮ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಒಂದು ವಾರದೊಳಗೆ ಸರಿ ಮಾಡಿಸುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಸಿಬಂಧಿ ಪಂಚಾಯತ್ ಗೆ ಭರವಸೆಯನ್ನು ನೀಡಿದರು.
ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತುಕೊಂಡವರಿದ್ದು ಅವರಿಗೆ ಅಕ್ರಮ ಸಕ್ರಮಕ್ಕೆ ಅರ್ಜಿ ಕೊಡಿಸಿ ಒಂದು ವಾರದೊಳಗೆ ವಿಲೇವಾರಿ ಮಾಡಿಸುವಂತೆ ಅಧ್ಯಕ್ಷ ಸುರೇಶ್ ಪೂಜಾರಿ ಅವರು ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೆಳುವಾಯಿ ಗ್ರಾ.ಪಂ ಮತ್ತು ಮೂಡುಬಿದಿರೆ ಪುರಸಭೆಯ ಸರಹದ್ದುವಿನಲ್ಲಿರು ಕಾನ ಪ್ರದೇಶದಲ್ಲಿರುವವರಿಗೆ ಸವಲತ್ತುಗಳನ್ನು ಪಡೆದುಕೊಳ್ಳಲು ಸಮಸ್ಯೆಯಾಗಿರುವುದರ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.
94ಸಿಯಲ್ಲಿ ಮನೆಕಟ್ಟಿ ಕುಳಿತುಕೊಂಡವರಿಗೆ ಅಕ್ರಮ-ಸಕ್ರಮಗೊಳಿಸಲು ಸಾಧ್ಯವಾಗುತ್ತಿಲ್ಲ, 53,55 ಹಾಗೂ 57 ರಲ್ಲಿ ಕೃಷಿ ಭೂಮಿಯನ್ನು ಅಕ್ರಮ - ಸಕ್ರಮ ಯೋಜನೆಯಲ್ಲಿ ಸಕ್ರಮಗೊಳಿಸಲು ಸಾಧ್ಯವಾಗುತ್ತಿಲ್ಲ ಈ ಎಲ್ಲಾ ಸಮಸ್ಯೆಯನ್ನು ಕಂದಾಯ ಇಲಾಖೆಯು ಗ್ರಾಮಸ್ಥರಿಗೆ ಸರಿಪಡಿಸಿಕೊಡುವಂತೆ ಸದಸ್ಯ ಭರತ್ ಶೆಟ್ಟಿ ಆಗ್ರಹಿಸಿದರು.
ಫೆಲಕುಂಜ, ಶಾಂತಿನಗರ, ಅಕ್ಷರಾಪುರ, ಅಂಬೊಟ್ಟು, ಅಖ್ತರ್ ಸಾಹೇಬರ ಮನೆ ಬಳಿ ಲೋ ವೋಲ್ಟೇಜ್ ಇದ್ದು ಇದನ್ನು ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ದೇವಿನಗರದಲ್ಲಿ ಹಲವಾರು ವರ್ಷಗಳಿಂದ ಮನೆಕಟ್ಟಿ ಕುಳಿತುಕೊಂಡವರಿಗೆ ಹಕ್ಕುಪತ್ರ ಸಿಕ್ಕಿಲ್ಲವೆಂದು ಸ್ಥಳೀಯರು ಆರೋಪಿಸಿದರು. ಆ ಜಾಗವು ಪರಂಬೋಕಲ್ಲಿ ಬರುವುದರಿಂದ ಹಕ್ಕುಪತ್ರ ನೀಡಲು ಸಮಸ್ಯೆಯಾಗಿದೆ. ಈಗಾಗಲೇ ಕೆಲವು ಕಡತಗಳನ್ನು ಡಿಸ್ ಫೋಸ್ ಮಾಡಲಾಗಿದೆ. ಹೊಸದಾಗಿ ಅರ್ಜಿ ಕೊಡಲು ಬಂದರೆ ಕಾನೂನಿನಲ್ಲಿ ಅವಕಾಶವಿದ್ದರೆ ಫಲಾನುಭವಿಗಳಿಗೆ 15 ದಿವಸದೊಳಗೆ ಹಕ್ಕುಪತ್ರ ನೀಡುವುದಾಗಿ ಗ್ರಾಮಾಧಿಕಾರಿ ಕಿಶೋರ್ ಭರವಸೆ ನೀಡಿದರು.
ನಾಲ್ಕುಮಾರ್ಗ ಸೇರುವಲ್ಲಿರುವ ಬಸ್ಸು ತಂಗುದಾಣದಲ್ಲಿ ಕೆಲವರು ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದು ಇದರಿಂದ ಶಾಲೆಯಿಂದ ಬರುವ ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಪೊಲೀಸರು ಈ ಬಗ್ಗೆ ಗಮನ ಹರಿಸುವಂತೆ ಸದಸ್ಯೆ ಶುಭ ಆಗ್ರಹಿಸಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಯುಗೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು.
ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಜಯಂತಿ ಬಿ.ಸಾಲ್ಯಾನ್ ಸಹಿತ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು. ದ್ವಿ.ದ.ಲೆ.ಸ.ರಮೇಶ್ ಬಂಗೇರಾ ಅವರು ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಿದರು. ಪಿಡಿಒ ಭೀಮ ನಾಯಕ್ ಬಿ. ಸ್ವಾಗತಿಸಿದರು.
-----------------
ಗ್ರಾಮಸಭೆಯಲ್ಲಿ ಮಾರ್ಧನಿಸಿದ ರಾಷ್ಟ್ರಭಾಷೆ
ಬೆಳುವಾಯಿಯಲ್ಲಿ ನಡೆದ ಗ್ರಾಮಸಭೆಗೆ ಪಂಚಾಯತ್ ನವರು ರಾ.ಹೆ.ಇಲಾಖೆಯ ಅಧಿಕಾರಿಗಳನ್ನು ಕರೆಸಿದ್ದರು. ಈ ಸಂದರ್ಭ ಇಲಾಖೆಯ ಪರವಾಗಿ ಸಮಸ್ಯೆಯನ್ನು ಆಲಿಸಲು ಬಂದ ಇಲಾಖಾ ಸಿಬಂದಿಗೆ ಕನ್ನಡ ಅಥವಾ ತುಳು ಭಾಷೆ ಮಾತನಾಡಲು ಬರದೆ ಹಿಂದಿ ಮಾತ್ರ ಬರುತ್ತಿತ್ತು. ಅಧ್ಯಕ್ಷ ಸುರೇಶ್ ಪೂಜಾರಿ, ಸೂರಜ್ ಆಳ್ವ, ಭರತ್ ಶೆಟ್ಟಿ ಮತ್ತು ಗ್ರಾಮಸ್ಥರೀರ್ವರು ರಾಷ್ಟ್ರಭಾಷೆ ಹಿಂದಿಯಲ್ಲೇ ರಾ.ಹೆ.ಯಿಂದ ಗ್ರಾಮಸ್ಥರಿಗಾಗಿರುವ ಸಮಸ್ಯೆಯನ್ನು ತಿಳಿಸಿದ್ದರಲ್ಲದೆ ತರಾಟೆಗೂ ತೆಗೆದುಕೊಂಡರು.
----------
0 Comments