ಪಾಲಡ್ಕ -ಕಲ್ಲಮುಂಡ್ಕೂರು ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿತ
* ವಾಹನ, ಜನಸಂಚಾರ ಬಂದ್, ಕುಟುಂಬಗಳ ಸ್ಥಳಾಂತರ
ಮೂಡುಬಿದಿರೆ: ಪಾಲಡ್ಕ-ಕಲ್ಲಮುಂಡ್ಕೂರು ಸಂಪರ್ಕ ರಸ್ತೆಗೆ ಶನಿವಾರ ಮುಂಜಾನೆಯ ವೇಳೆ ಗುಡ್ಡ ಕುಸಿದು ಬಿದ್ದಿದ್ದು ಜನ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಾಲಡ್ಕ-ಕಲ್ಲಮುಂಡ್ಕೂರಿಗೆ ಹಾದು ಹೋಗುವ ಪಿಡಬ್ಲ್ಯೂಡಿ ರಸ್ತೆಯ ಗುಂಡ್ಯಡ್ಕ ಬಳಿಯಲ್ಲಿ ಈ ಘಟನೆ ನಡೆದಿದ್ದು ಬೆಳಿಗ್ಗೆ ಗಮನಕ್ಕೆ ಬಂದಿದೆ.
ತಕ್ಷಣ ಪುತ್ತಿಗೆ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ ಬಿ ಮತ್ತು ಪಾಲಡ್ಕ ಪಂಚಾಯತ್ ನ ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ, ಎಪಿಎಂಸಿಯ ಮಾಜಿ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಡ್ಡ ಕುಸಿದು ರಸ್ತೆಗೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲೆಂದು ಪ್ರವೀಣ್ ಪಿರೇರಾ ಅವರು ತನ್ನ ಜೆಸಿಬಿಯನ್ನು ತರಿಸಿದ್ದರು. ಜೆಸಿಬಿ ಮಣ್ಣು ತೆರವುಗೊಳಿಸುತ್ತಿದ್ದಂತೆ ಮತ್ತೊಮ್ಮೆ ಗುಡ್ಡ ಕುಸಿದಿದ್ದು ಈ ಸಂದರ್ಭ ಜೆಸಿಬಿಯನ್ನು ಹಿಂದಕ್ಕೆ ತಳ್ಳಿದೆ. ಅಲ್ಲದೆ ಅಲ್ಲಿಯೇ ಇದ್ದ ಜನರು ಹಿಂದಕ್ಕೆ ಓಡಿ ಬಂದಿದ್ದರಿಂದ ಭಾರೀ ದುರಂತ ತಪ್ಪಿದೆ.
ಗುಡ್ಡದ ಕೆಳಗಡೆ ಎರಡು ಕೃಷಿ ಕುಟುಂಬಗಳಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ ಬಿ ಅವರು ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದ್ದಾರೆ.
ದ.ಕ ಹಾಲು ಉತ್ಪಾದಕರ ಒಕ್ಕಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಜನ ಸಂಚಾರ, ವಾಹನ ಸಂಚಾರ ಮಾಡದಂತೆ ಜನರಿಗೆ ತಿಳಿಸಿದ್ದಾರೆ.
ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ , ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ, ದಯಾನಂದ, ಕಂದಾಯ ನಿರೀಕ್ಷಕ ಮಂಜುನಾಥ್, ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬಂಧಿಗಳು, ಅಗ್ನಿಶಾಮಕ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾರ್ಯವನ್ನು ಕೈಕೊಂಡಿದ್ದಾರೆ.
*ಪಾಲಡ್ಕ ಗ್ರಾ.ಪಂ.ನ ಉಪಾಧ್ಯಕ್ಷ ಪ್ರವೀಣ್ ಪಿರೇರಾ ಅವರು ಬೆಳಿಗ್ಗೆ 7 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ತರಿಸಿ ಮಣ್ಣು ತೆರವುಗೊಳಿಸಲು ಮುಂದಾಗಿದ್ದು ಈ ಬಗ್ಗೆ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಿಡಿಒ ಅವರು ಕೂಡಾ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೋಡಿ ಅಪಾಯದಲ್ಲಿರುವ ಕುಟುಂಬಗಳಿಗೆ ಸ್ಥಳಾಂತರ ಆಗುವಂತೆ ಸೂಚಿಸಿದ್ದರು. ಅಲ್ಲದೆ ಕಳೆದ ನಾಲ್ಕು ದಿನಗಳಿಂದಲೂ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ ಅಪಾಯದಲ್ಲಿರುವ ಕುಟುಂಬಗಳಿಗೆ ಪಂಚಾಯತ್ ಸಭಾಭವನದಲ್ಲಿ ತೆರೆದಿರುವ ಕೇಂದ್ರದಲ್ಲಿ ಆಶ್ರಯ ಪಡೆಯುವಂತೆ ತಿಳಿಸುತ್ತಿದ್ದಾರೆ. ಗ್ರಾಮಕರಣಿಕೆ ಗಾಯತ್ರಿ ಭೇಟಿ ನೀಡಿದ್ದಾರೆ
0 Comments