ಮಾಧ್ಯಮದ ಸಹಕಾರದಿಂದ ಹಾಲು ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ: ಸುಚರಿತ ಶೆಟ್ಟಿ
ಮೂಡುಬಿದಿರೆ ಪ್ರೆಸ್ ಕ್ಲಬ್ ಮಾಧ್ಯಮ ಹಬ್ಬ
ಮೂಡುಬಿದಿರೆ: ಸಂವಿಧಾನದ ಆಶಯದಂತೆ ಪತ್ರಿಕಾ ರಂಗ ಕೆಲಸ ಮಾಡಬೇಕು. ಮಾಧ್ಯಮ ರಂಗದ ಸಹಕಾರದಿಂದ ದ.ಕ ಜಿಲ್ಲಾ ಹಾಲು ಒಕ್ಕೂಟವು ರಾಜ್ಯದಲ್ಲೇ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಸಮಾಜ ಮಂದಿರದಲ್ಲಿ ಸೋಮವಾರ ಸಂಜೆ ಮೂಡುಬಿದಿರೆ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ''ಮಾಧ್ಯಮ ಹಬ್ಬ'' ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮಾಡಲು ಸಾಧ್ಯವಾಗದ ಹಲವು ಕಾರ್ಯಗಳನ್ಮು ಪತ್ರಿಕಾರಂಗ ಮಾಡಿ ತೋರಿಸಿದೆ. ಎಲ್ಲ ಕ್ಷೇತ್ರದ ಕೌಶಲ ಮತ್ತು ದೂರದೃಷ್ಟಿ, ಜ್ಞಾನ ಗ್ರಹಿಕೆ ಇದ್ದಾಗ ಪತ್ರಕರ್ತ ಯಶಸ್ಸು ಸಾಧಿಸಲು ಸಾಧ್ಯ ಎಂದರು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಪತ್ರಕರ್ತರ ಬದುಕಿಗೆ ಭದ್ರತೆ ನೀಡಲು ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಪತ್ರಕರ್ತನಿಗಿರುವ ಉತ್ತಮ ಮನಸ್ಥಿತಿಯಿಂದ, ಒಂದು ಸಮಾಜವು ಆರೋಗ್ಯ ಪೂರ್ಣವಾಗಲು ಸಾಧ್ಯ. ಸಂವಿಧಾನದ ಆಶಯದಂತೆ ಪತ್ರಿಕೋದ್ಯಮವು ಸಾಧನೆ ಹಾದಿಯಲ್ಲಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೆ ಸಾಧ್ಯವಾಗದ ಕಾರ್ಯವನ್ನು ಇಂದು ಪತ್ರಿಕೋದ್ಯಮ ಮತ್ತು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು.
ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿನಿಧಿ ಉಪನ್ಯಾಸದಲ್ಲಿ, ಗ್ರಾಮೀಣ ಪತ್ರಕರ್ತರಿಗಿರುವ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತು ಪತ್ರಕರ್ತ ಮೌನೇಶ್ ವಿಶ್ವಕರ್ಮ ಅವರು ಮಾತನಾಡಿ ಪತ್ರಕರ್ತನು ಮನಸ್ಸು ಮಾಡಿದರೆ ಗ್ರಾಮದಲ್ಲಿರುವ ಯಾವುದೇ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಪತ್ರಿಕಾ ಮಾಧ್ಯಮದಲ್ಲಿ ಬೆಳೆಯಬೇಕು.
ಕ್ರಿಯಾಶೀಲತೆಗೆ ಗ್ರಾಮೀಣ ಪತ್ರಕರ್ತರಿಗೆ ಹೆಚ್ಚಿನ ಅವಕಾಶ ಇದೆ. ಆಲಿಸುವ ಹಾಗೂ ಅಧ್ಯಯನಶೀಲತೆ ಇದ್ದಾಗ ಗ್ರಾಮೀಣ ಪತ್ರಕರ್ತ ಯಶಸ್ವಿ ಆಗಲು ಸಾಧ್ಯ ಎಂದರು. ಮನೋಮಾಲಿನ್ಯ ಮುಕ್ತ ಸಮಾಜದ ನಿರ್ಮಾಣ ಅವಶ್ಯ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಮೂಡುಬಿದಿರೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಗ್ರಾಮೀಣ ಪತ್ರಕರ್ತರ ನೆರವಿಗೆ ಜಿಲ್ಲಾ ಸಂಘ ಸದಾ ಬದ್ಧವಾಗಿದೆ. ಪತ್ರಕರ್ತರಿಗೆ ಸಂಚಾರ, ಆರೋಗ್ಯ, ವಿಮಾ ಮತ್ತಿತರ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ, ಪತ್ರಕರ್ತರು ಒಗ್ಗಟ್ಟಾಗಿ ಮೂಡುಬಿದಿರೆ ಅಭಿವೃದ್ಧಿಗೆ ಹಾಗೂ ಸೌಹಾರ್ದತೆಗೆ ಕೊಡುಗೆ ನೀಡುತ್ತಿರುವ ಖುಷಿ ಇದೆ. ಜಿಲ್ಲಾ ಸಂಘದ ಗ್ರಾಮ ವಾಸ್ತವ್ಯದಲ್ಲಿ ಮೂಡುಬಿದಿರೆ ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿಗೆ ನಾವು ಸದಾ ಬದ್ಧ ಎಂದರು.
ಪ್ರೆಸ್ ಕ್ಲಬ್ ಗೌರವ :ಛಾಯಾಗ್ರಾಹಕ ಮಾನಸ ರವಿ ಎಸ್. ಕೋಟ್ಯಾನ್, ಮೂಡುಬಿದಿರೆಯ ಹಿರಿಯ ಕವಿ ಆರ್. ರಾಮಚಂದ್ರ ಪೈ ಇವರಿಗೆ ಪ್ರೆಸ್ ಕ್ಲಬ್ ಗೌರವ ನೀಡಿ ಸನ್ಮಾನಿಸಲಾಯಿತು. ಹಾಗೂ ಎಸ್ ಎಸ್ ಎಲ್ ಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಯಜೇಶ್ ಅಶ್ವತ್ಥಪುರ ಮತ್ತು ಸನ್ಮತ್ ಎಸ್ ಆಚಾರ್ಯ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಛಾಯಾಗ್ರಾಹಕ ರವಿ ಎಸ್. ಕೋಟ್ಯಾನ್,
ತನ್ನ ಬೆಳವಣಿಗೆಯಲ್ಲಿ ಮಾಧ್ಯಮ ರಂಗದ ಕೊಡುಗೆ ವಿಶೇಷವಾದ್ದು ಎಂದರು. ಕವಿ ರಾಮಚಂದ್ರ ಪೈ, ''ಎಚ್ಚರಿಕೆ'' ಕವನ ವಾಚಿಸಿದರು.
ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹರೀಶ್ ಆದೂರು ಸ್ವಾಗತಿಸಿದರು. ನವೀನ್ ಸಾಲ್ಯಾನ್ ಮತ್ತು ರಾಘವೇಂದ್ರ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ವಂದಿಸಿದರು.
0 Comments