ಕೊರಗ ಜನಾಂಗದ ಮನೆ ಜಲಾವೃತ : ಪಂಚಾಯತ್ ಸಭಾಭವನದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ ದರೆಗುಡ್ಡೆ ಗ್ರಾಮ ಪಂಚಾಯತ್

ಜಾಹೀರಾತು/Advertisment
ಜಾಹೀರಾತು/Advertisment

 ಕೊರಗ ಜನಾಂಗದ ಮನೆ ಜಲಾವೃತ : ಪಂಚಾಯತ್ ಸಭಾಭವನದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ  ದರೆಗುಡ್ಡೆ ಗ್ರಾಮ ಪಂಚಾಯತ್ 

ಮೂಡುಬಿದಿರೆ: ಮನೆಯ ಮಾಡು ಮತ್ತು ಹೆಂಚು ಹೋಗಿ ದುರಾವಸ್ಥೆಯಲ್ಲಿರುವ ಕೊರಗ ಕುಟುಂಬದ ಮನೆಯೊಳಗೆ ಮಳೆ ನೀರು ಬಿದ್ದು ಜಲಾವೃತಗೊಂಡು ವಾಸ ಮಾಡಲು ಅನಾನುಕೂಲವಾಗಿರುವುದನ್ನು ಕಂಡ  ದರೆಗುಡ್ಡೆ ಗ್ರಾ.ಪಂಚಾಯತ್  ಆ ಕುಟುಂಬಕ್ಕೆ ತಮ್ಮ ಸಭಾಭವನದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟು ಮಾನವೀಯತೆ ಮೆರೆದಿದೆ.

 


ದರೆಗುಡ್ಡೆ ಗ್ರಾ.ಪಂ.ವ್ಯಾಪ್ತಿಯ ಕೆಲ್ಲಪುತ್ತಿಗೆ ಕೆಂಪುಗುಡ್ಡೆಯ ಕೊರಗರ ಕಾಲನಿಯಲ್ಲಿ ವಾಸವಿರುವ ವಸಂತ, ಅವರ ಸಹೋದರಿ ಶಾಂಭವಿ ಅವರ ಮನೆಯೇ ಜಲಾವೃತಗೊಂಡಿರುವ ಮನೆ.  

 

  ಶಾಂಭವಿ ಅವರು ತನ್ನ  ಶಾಲೆಗೆ ಹೋಗುವ ಇಬ್ಬರು ಮಕ್ಕಳ  ಸಹಿತ ಕುಟುಂಬದೊಂದಿಗೆ ಹಳೆ ಕಾಲದ ಹಂಚಿನ ಮನೆಯಲ್ಲಿ ವಾಸವಾಗಿದ್ದರು. ನಾಲ್ಕೈದು ದಿನಗಳ ಹಿಂದೆ  ಸುರಿದ ಭಾರಿ ಮಳೆಯಿಂದಾಗಿ ಮನೆಯ ಕೆಲವು ಹಂಚು ನಾಶವಾಗಿ ಮಳೆ ನೀರು ಒಳಸುರಿದು ಜಲಾವೃತವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪಂಚಾಯತು ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕುಟುಂಬವನ್ನು ಅಪಾಯದಿಂದ ಪಾರು ಮಾಡಿದ್ದಾರೆ. 


ಪಂಚಾಯತ್ ಸಭಾಭವನದಲ್ಲಿ ವಾಸ್ತವ್ಯಕ್ಕೆ ಅವಕಾಶ : ಅಪಾಯದ ಸುಳಿವು ಅರಿತ ಪಂಚಾಯತ್ ಆಡಳಿತ ಕುಟುಂಬದವರಿಗೆ ಪಂಚಾಯತು ಸಭಾಭವನದಲ್ಲಿ ಉಳಿಕೊಳ್ಳಲು ವ್ಯವಸ್ಥೆ ಕಲ್ಪಿಸಿದೆ. ವಾಸ್ತವ್ಯಕ್ಕೆ ಬೇಕಾದ ಅಗತ್ಯ ನೆರವು ನೀಡುವ ಮೂಲಕ  ಮಾನವೀಯತೆಗೆ ಸಾಕ್ಷಿಯಾಗಿದೆ.

 ಘಟನಾ ಸ್ಥಳಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲೊಕೇಶ್ ಅವರು  ಭೇಟಿ ನೀಡಿ ದೂರದ ಇರ್ವತ್ತೂರು ಬಗಲ್ತಕಟ್ಟೆ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಸ್ಥಳೀಯ ದರೆಗುಡ್ಡೆ ಶಾಲೆಯಲ್ಲಿ ವಿದ್ಯಾಭ್ಯಾಸ ಒದಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೂಲಕ ವ್ಯವಸ್ಥೆ ಕಲ್ಪಿಸಿದ್ದಾರೆ.


ಅಪಾಯಕಾರಿ ಮನೆಯನ್ನು ಹೊಂದಿರುವ ಕುಟುಂಬಕ್ಕೆ ಮಳೆಗಾಲ ಮುಗಿದ ಕೂಡಲೇ ಪಂಚಾಯತ್ ಅನುದಾನ ಬಳಸಿ ಪ್ರತ್ಯೇಕ ಮನೆ ನಿರ್ಮಿಸಲು ತೀರ್ಮಾನಿಸಿದ್ದು ಅಲ್ಲಿವರೆಗೆ ಕುಟುಂಬ ವಾಸ ಮಾಡಲು ಬಾಡಿಗೆ ಮನೆಯ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ಪಂಚಾಯತು ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ತಿಳಿಸಿದ್ದಾರೆ. 


ಹಳೆ ಮನೆಯ ಮಾಡಿನ ಹಂಚು ನಾಶವಾದ ಜಾಗವನ್ನು ಮುಚ್ಚುಗಡೆಗೊಳಿಸುವ ರೀತಿಯಲ್ಲಿ ಈಗಾಗಲೇ ಪ್ಲಾಸ್ಟಿಕ್ ಹೊದಿಕೆಯನ್ನು ಪಂಚಾಯತ್ ವತಿಯಿಂದ ಅಳವಡಿಸಲಾಗಿದೆ. ಮನೆಯ ಸುರಕ್ಷತೆ ದೃಷ್ಟಿಯಲಿ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪಿಡಿಒ ರಾಜು ತಿಳಿಸಿದ್ದಾರೆ.


ವರದಿ : ಪ್ರೇಮಶ್ರೀ ಕಲ್ಲಬೆಟ್ಟು

Post a Comment

0 Comments