ಮೂಡುಬಿದಿರೆಯಲ್ಲಿ ಬೀಸಿದ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ
*ಲಕ್ಷಾಂತರ ರೂಪಾಯಿ ನಷ್ಟ
ಮೂಡುಬಿದಿರೆ : ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ತಂತಿಗಳು ಧರೆಗುರುಳಿದ್ದಲ್ಲದೆ ಹಲವಾರು ಮನೆಗಳಿಗೆ ಹಾನಿಯುಂಟ್ಟಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ನಡೆದಿದೆ.
ಒಂಟಿಕಟ್ಟೆ, ಸ್ವರಾಜ್ಯಮೈದಾನ ಪರಿಸರ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರಿಳಿವೆ ಹಾಗೂ ಸ್ವರಾಜ್ಯ ಮೈದಾನದ ಬಳಿಯಿರುವ ಪತ್ರಕರ್ತ ಧನಂಜಯ ಮೂಡುಬಿದಿರೆಯವರ ಮನೆಗೆ ಮರ ಉರುಳಿ ಬಿದ್ದಿದ್ದು ಅಪಾರ ಹಾನಿಯಾಗಿದೆ. ಇದೇ ಪರಿಸರದಲ್ಲಿರುವ ಪ್ರಶಾಂತ್, ತೇಜಸ್, ಮಹೇಶ್ ಎಂಬವರ ಮನೆಗೂ ತೀವ್ರ ಹಾನಿಯಾಗಿದೆ. ಮಹೇಶ್ ಎಂಬವರ ಮನೆಯ ಹಿಂಬದಿಯಲ್ಲಿದ್ದ ತೆಂಗಿನಮರವೊಂದು ಬುಡ ಸಮೇತ ತುಂಡರಿಸಿ ಸಮೀಪದ ಗದ್ದೆಗೆ ಹಾರಿದ್ದು ಘಟನೆಯ ತೀವ್ರತೆಗೆ ಸಾಕ್ಷಿಯಾಗಿದೆ. ಮಾಸ್ತಿಕಟ್ಟೆಯ ಅಚ್ಚಣ್ಣ ಎಂಬವರ ಮನೆಗೆ ಭಾರೀ ಹಾನಿಯಾಗಿದ್ದು ಸಮೀಪದ ಎರಡೂ ಮನೆಗಳ ಹಂಚುಗಳು ಹಾರಿಹೋಗಿವೆ. ಅಲ್ಲದೇ ಪೇಪರ್‌ಮಿಲ್ ಸನಿಹ ಟ್ರಾನ್ಸ್‌ಫಾರ್ಮರ್ ಡಿ.ಪಿ. ಉರುಳಿ ಬಿದ್ದಿದೆ. ಒಂಟಿಕಟ್ಟೆಯಲ್ಲಿ ಶುಭಕರ, ಪದ್ಮನಾಭ ಎಂಬವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲೂ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮಾಜಿ ಸಚಿವರ ಅಭಯಚಂದ್ರ ಜೈನ್, ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ದಿವ್ಯಾ, ಕೊರಗಪ್ಪ ಹಾಗೂ ಕಂದಾಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಸ್ಕಾಂ ಸಿಬ್ಬಂದಿಗಳು ಉರುಳಿಬಿದ್ದ ಕಂಬಗಳನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.
0 Comments