ಗಾಳಿ ಮಳೆಗೆ ಮೂಡುಬಿದಿರೆ ತತ್ತರ
ಧರೆಗುರುಳಿದ ವಿದ್ಯುತ್ ಕಂಬಗಳು, 6 ಮನೆಗಳಿಗೆ ಹಾನಿ
ಮೂಡುಬಿದಿರೆ : ತಾಲೂಕಿನ ವ್ಯಾಪ್ತಿಯಲ್ಲಿ ಸೋಮವಾರ ಬೀಸಿದ ಗಾಳಿ ಮಳೆಗೆ ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲೋನಿ ಪರಿಸರದಲ್ಲಿ ೬ಮನೆಗಳು ಹಾನಿಗೀಡಾಗಿವೆ. ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ.
ಅಲಂಗಾರ್ ಚರ್ಚ್ ಬಳಿ ಮರವೊಂದು ಉರುಳಿದೆ. ಈ ಸಂದರ್ಭ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಕಾರಿಗೆ ಹಾನಿಯಾಗಿದ್ದು ಚಾಲಕ ವಿಶುಕುಮಾರ್ ಶೆಟ್ಟಿ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಚಂದ್ರಾಪುರದಲ್ಲಿ ನಾರಾಯಣ, ಶಾಂತಿ ರೋಡ್ರಿಗಸ್, ಸರಸ್ವತಿ ಶೆಟ್ಟಿಗಾರ್, ಜುಲಿಯಾನ ಡಿಸೋಜ, ಆಶ್ರಯ ಕಾಲೋನಿಯಲ್ಲಿ ಸತೀಶ್ ಸಾಲ್ಯಾನ್ ಹಾಗೂ ಸನಿಹದ ಮನೆಗೆ ಭಾಗಶಃ ಹಾನಿಯಾಗಿದೆ
. ಅಲಂಗಾರ್ ರಿಕ್ಷಾ ಜಂಕ್ಷನ್‌ನಲ್ಲಿ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದ್ದು ಈ ವೇಳೆ ಯಾವುದೇ ವಾಹನಗಳಿಲ್ಲದಿರುವುದರಿಂದ ಅನಾಹುತ ಸಂಭವಿಸಿಲ್ಲ. ಪಡುಕೊಣಾಜೆ ವ್ಯಾಪ್ತಿಯಲ್ಲಿ ರಬ್ಬರ್ ಪ್ಲಾಂಟೇಶನ್‌ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ. ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ಕಂದಾಯ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮೂಡುಬಿದಿರೆ ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಜಯರಾಜ್ , ಬಿಜೆಪಿ ಪ್ರಮುಖ ರಂಜಿತ್ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
0 Comments