ಅನಾರೋಗ್ಯದಿಂದ ನಿಧನ ಹೊಂದಿದ ಗ್ರಾ.ಪಂ.ಸಿಬಂದಿಗಳಿಗೆ ಶ್ರದ್ಧಾಂಜಲಿ ಅರ್ಪಣೆ
ಮೂಡುಬಿದಿರೆ: ಅನಾರೋಗ್ಯದಿಂದ ಇತ್ತೀಚೆಗೆ ನಿಧನ ಹೊಂದಿದ ವಾಲ್ಪಾಡಿಯ ಗ್ರಾ.ಪಂ.ಸಿಬಂದಿ ವಸಂತ್ ಮತ್ತು ಕೊಲ್ನಾಡು ಗ್ರಾ.ಪಂ.ಸಿಬಂದಿ ಸುಂದರ್ ಅವರಿಗೆ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಸಮಾಜ ಮಂದಿರದಲ್ಲಿ ಶನಿವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ದೇವಿ ಪ್ರಸಾದ್ ಬೊಳ್ಮ ಅವರು ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿ ಗ್ರಾ.ಪಂ.ಸಿಬಂದಿಗಳು ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಯಾವುದೇ ಭದ್ರತೆಯಿಲ್ಲ, ಅನಾರೋಗ್ಯಕ್ಕೆ ತುತ್ತಾದರೆ ಇಎಸ್ ಐ ಕೂಡಾ ಇಲ್ಲ. ವಸಂತ್ ಅವರು ಮೂರು ತಿಂಗಳುಗಳ ಕಾಲ ಅನಾರೋಗ್ಯದಿಂದ ಮನೆಯಲ್ಲಿ ಇದ್ದಾಗ ಅವರಿಗೆ ವೇತನವನ್ನು ನೀಡದೆ ಮಾನಸಿಕವಾಗಿ ನೋವನ್ನು ಅನುಭವಿಸುವಂತೆ ಮಾಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿರುವ ಅವರ ಕುಟುಂಬವು ಬಡತನದಿಂದ ಕೂಡಿದೆ ಸಂಬಂಧಪಟ್ಟ ಇಲಾಖೆಯು ತಕ್ಷಣ ಎಚ್ಚೆತ್ತುಕೊಂಡು ಅವರಿಗೆ ನೀಡಬೇಕಾಗಿರುವ ವೇತನವನ್ನು ತಕ್ಷಣ ನೀಡಿ ನ್ಯಾಯ ಒದಗಿಸಬೇಕು ಮತ್ತು ಜೀವನೋಪಾಯಕ್ಕಾಗಿ ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಜಿಲ್ಲಾ ಸಮಿತಿ ಉಪಾಧ್ಯಕ್ಷರು ಪ್ರಿಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧರ್ ಶಿರ್ತಾಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸತೀಶ್, ಬಂಟ್ವಾಳ ತಾ.ಅಧ್ಯಕ್ಷ ಮೋಹನ್, ಮೂಡುಬಿದಿರೆ ತಾ.ಅಧ್ಯಕ್ಷೆ ನಯನ, ಮಂಗಳೂರು ತಾ.ಅಧ್ಯಕ್ಷ ಇರ್ಷಾದ್, ಮೂಲ್ಕಿ ತಾ.ಪಂ.ಅಧ್ಯಕ್ಷ ಉದಯ ಕುಮಾರ್ ಹಾಗೂ ಸಂಘದ ಸದಸ್ಯರುಗಳು ಭಾಗವಹಿಸಿ ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು.
0 Comments