ಮೂಡುಬಿದಿರೆ: ಈ ಬಾರಿ ಶೇ. 95.71 ಫಲಿತಾಂಶ ದಾಖಲಿಸಿದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಈ ಬಾರಿ ಶೇ. 95.71 ಫಲಿತಾಂಶ ದಾಖಲಿಸಿದ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ

ಮೂಡುಬಿದಿರೆ: ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳನ್ನು ನೋಂದಾವಣೆ ಮಾಡಿಕೊಂಡು ಅವರಿಗೆ ಉಚಿತವಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಹಿತ ಇತರ ಸೌಲಭ್ಯಗಳನ್ನು ನೀಡಿರುವ ಕಾರಣ ಎಸ್ ಎಸ್ ಎಲ್ ಸಿ  ಪರೀಕ್ಷೆಯಲ್ಲಿ ಈ ಬಾರಿ ಬಾಬು ರಾಜೇಂದ್ರ ಪ್ರಸಾದ್  ಪ್ರೌಢಶಾಲೆಯು ಶೇ 95.71 ಫಲಿತಾಂಶವನ್ನು ದಾಖಲಿಸಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ.ಅಭಯಚಂದ್ರ ತಿಳಿಸಿದ್ದಾರೆ.


 ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮೂಡುಬಿದಿರೆಯಲ್ಲಿ ಸ್ಥಾಪನೆಗೊಂಡ  ಎರಡನೇ ಹೈಸ್ಕೂಲು ಬಾಬುರಾಜೇಂದ್ರ ಪ್ರಸಾದ್ ಅನುದಾನಿತ ಪ್ರೌಢಶಾಲೆ 57 ವರ್ಷಗಳನ್ನು ಪೂರೈಸಿದೆ.  ಇಲ್ಲಿ ನಮ್ಮೂರಿನ ವಿದ್ಯಾರ್ಥಿಗಳಲ್ಲದೆ   ರಾಜ್ಯದಾದ್ಯಂತದ ಹಿಂದುಳಿದ ಮಕ್ಕಳು ಹಾಸ್ಟೆಲ್ ನಲ್ಲಿ ವಾಸಿಸಿ ಕಲಿಕೆಗಾಗಿ ಈ ಪ್ರೌಢಶಾಲೆಗೆ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ  ಸುಮಾರು ಆರು ಲಕ್ಷ ಖರ್ಚಿನೊಂದಿಗೆ  ಎಲ್ಲ ಉಚಿತ ಸೌಲಭ್ಯಗಳನ್ನು ಅವರೆಲ್ಲರಿಗೂ ಒದಗಿಸಲಾಗುತ್ತಿದ್ದು ಈ ಕ್ರಮ ಪ್ರತಿ ವರ್ಷವೂ ಮುಂದುವರೆಯುತ್ತಿದೆ. 


  ಆರ್ಥಿಕವಾಗಿ ಹಿಂದುಳಿದವರೇ ಈ ಕನ್ನಡ ಮಾಧ್ಯಮ ಶಾಲೆಗೆ ಬರುತ್ತಿರುವ ಕಾರಣ ಆಂಗ್ಲಭಾಷಾ ಕಲಿಕೆ ಹಾಗೂ ಮಾತುಗಾರಿಕೆಗೂ ಕೂಡ ವಿಶೇಷ ಒತ್ತನ್ನು ನೀಡುವ ಉದ್ದೇಶದಿಂದ ಶಾಲೆಯಲ್ಲಿ ಈ ವರ್ಷದಿಂದಲೇ ಇಂಗ್ಲೀಷ್ ಭಾಷಾ ಶಿಕ್ಷಕಿಯನ್ನು ನೇಮಿಸಲಾಗುವುದು ಎಂದು ತಿಳಿಸಿದರು.


ಆಸ್ಕರ್ ಫೆರ್ನಾಂಡಿಸ್  ಅವರ ಎಂಪಿ ಅನುದಾನದಲ್ಲಿ ನೀಡಿದ 5 ಲಕ್ಷ ರೂಪಾಯಿ, ಎಂಎಲ್ ಸಿ ಬೋಜೇ ಗೌಡ್ರು ನೀಡಿದ ಎರಡು ಲಕ್ಷ ಅನುದಾನವನ್ನು ಮೂಲಭೂತ ಸೌಲಭ್ಯಕ್ಕಾಗಿ ಬಳಸಿ, ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಇತ್ಯಾದಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ವಿವಿಧ ಬ್ಯಾಂಕುಗಳಿಂದಲೂ ಸಹಾಯಧನವನ್ನು ಅಪೇಕ್ಷಿಸಲಾಗಿದೆ ಎಂದರು. 


  ಆಡಳಿತ ಮಂಡಳಿಯ ಸಂಚಾಲಕ ರಾಮನಾಥ್  ಭಟ್ ಅವರು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಸಹಾಯದಿಂದ ಗಾಯನ, ನೃತ್ಯ, ಕಂಪ್ಯೂಟರ್, ಚೆಂಡೆ, ಯಕ್ಷಗಾನ ಇತ್ಯಾದಿ ಕಲಿಕೆಗೂ ಆದ್ಯತೆಯನ್ನು ನೀಡುತ್ತಿದ್ದಾರೆ ಇದಕ್ಕಾಗಿ  ಒಬ್ಬರು ಶಿಕ್ಷಕರು ಹಾಗೂ ಒಬ್ಬರು ಸಿಬ್ಬಂಧಿಯನ್ನು ನೇಮಿಸಲಾಗಿದ್ದು ಆಡಳಿತ ಮಂಡಳಿಯು  ವೇತನವನ್ನು ನೀಡುತ್ತಿದೆ ಎಂದರು.


ಮುಖ್ಯ ಶಿಕ್ಷಕಿ ತೆರೆಸಾ ಖರ್ಡೋಜ ಮಾತನಾಡಿ ಸರಕಾರದಿಂದ ನೇಮಕಗೊಂಡ  8 ಮಂದಿ ಶಿಕ್ಷಕರು ಹಾಗೂ ಇಬ್ಬರು ಸಿಬ್ಬಂದಿಗಳು ಇವರೆಲ್ಲರ ಸಾಮೂಹಿಕ ಸಹಕಾರದಿಂದ ವರ್ಷ ಪೂರ್ತಿ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸವನ್ನಲ್ಲದೆ ಕಲಿಕೆಯಲ್ಲಿ ತೀರಾ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಡ ಸಂಜೆಯ ತನಕ ವಿಶೇಷ ತರಗತಿ, ಪಾಠದ ಪುನರಾವರ್ತನೆ, ಇತ್ಯಾದಿಗಳನ್ನು ಮಾಡಿದ ಕಾರಣ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು ಉತ್ತಮವಾಗಿ ಪ್ರೋತ್ಸಾಹವನ್ನು ನೀಡಿರುವ  ಕಾರಣ  ಉತ್ತಮ ಫಲಿತಾಂಶವು  ಬರಲು ಕಾರಣವಾಗಿದೆ ಎಂದರು. 

ಈ ಸಂದರ್ಭದಲ್ಲಿ ಶಿಕ್ಷಕ ಕಿರಣ್ ಕುಮಾರ್ ಮತ್ತು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರಾಮ್ ಪ್ರಸಾದ್ ಭಟ್ ಉಪಸ್ಥಿತರಿದ್ದರು.

Post a Comment

0 Comments