ಚುನಾವಣಾ ಜಾಗೃತಿ : ಬೈಕ್ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 ಚುನಾವಣಾ ಜಾಗೃತಿ : ಬೈಕ್ ಜಾಥಾ


ಮೂಡುಬಿದಿರೆ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ, ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಮೂಡುಬಿದಿರೆ ತಾಲೂಕು ಪಂಚಾಯತ್, ತಾಲೂಕು ಕಚೇರಿ, ಮೂಡುಬಿದಿರೆ ಇವುಗಳ  ಸಹಯೋಗದಲ್ಲಿ ಬೈಕ್ ಜಾಥಾ ಶುಕ್ರವಾರ ಸಂಜೆ ನಡೆಯಿತು.

 ಮೂಡುಬಿದಿರೆ  ತಹಶೀಲ್ದಾರ್  ಶ್ರೀಧರ್ ಎಸ್. ಮಂದಲಮನಿ, ಪೋಲಿಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಅವರ ಸಹಯೋಗದೊಂದಿಗೆ  ಸಹಾಯಕ ಚುನಾವಣಾಧಿಕಾರಿ ರಾಜು ಕೆ., ಹಸಿರು‌ ನಿಶಾನೆ ಹಾರಿಸುವ ಮೂಲಕ ಜಾಥಾಕ್ಕೆ ಚಾಲನೆಯನ್ನು ನೀಡಿದರು.

ಮೂಡುಬಿದಿರೆ ತಾಲೂಕು ಪಂಚಾಯತ್ ಆವರಣದಿಂದ ಹೊರಟ ಜಾಥಾವು ಪುರಸಭೆ ಮುಂಭಾಗದಿಂದ ತೆರಳಿ ಸ್ವರಾಜ್ಯ ಮೈದಾನದ ಬಳಿಯಿಂದ ಆಳ್ವಾಸ್ ಹೆಲ್ತ್ ಸೆಂಟ್ರರ್ ಮೂಲಕ ನಿಶ್ಮಿತಾ ಟವರ್ ಮುಂಭಾಗದ ಮೂಲಕ ಮೂಡುಬಿದಿರೆ ಮುಖ್ಯ ಪೇಟೆಗೆ ತಲುಪಿ ಹನುಮಾನ್ ದೇವಸ್ಥಾನದ ಮೂಲಕ ಹಳೆ ಪೋಲಿಸ್ ಠಾಣೆಯಿಂದ ಮೆಸ್ಕಾಂ ಮೂಲಕ ತಿರುಗಿ ಅಮರಶ್ರೀ ಮೂಲಕ ಮೂಡುಬಿದಿರೆ ಬಸ್ ನಿಲ್ದಾಣಕ್ಕೆ ತೆರಳಿ ವಾಪಸ್ ಮೂಡುಬಿದಿರೆ ತಾಲೂಕು ಪಂಚಾಯತ್ ನಲ್ಲಿ ಸಮಾಪನಗೊಂಡಿತು.


ಜಾಥಾದ ಬಳಿಕ ತಾಲೂಕು ಪಂಚಾಯತ್ ಆವರಣದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.‌ವೆಂಕಟಚಲಪತಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಬಳಿಕ ಮಾತನಾಡಿದ ಅವರು, ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ನಾವೆಲ್ಲರೂ ಬೈಕ್ ಜಾಥಾದ ಮೂಲಕ ಮಾಹಿತಿ ನೀಡುವ ಪ್ರಯತ್ನವನ್ನು ಮಾಡಿದ್ದೇವೆ. ಅದರಂತೆ ನಿಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ನಿಮ್ಮ ಬಂಧುಮಿತ್ರರಿಗೂ ಎಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಸಿದರು.


ಬೈಕ್ ಜಾಥಾದುದ್ದಕ್ಕೂ ಸಹಾಯಕ ನಿರ್ದೇಶಕರಾದ ಸಾಯಿಷ ಚೌಟ ಅವರು ಮತದಾನದ ಮಾಹಿತಿಯನ್ನು ಸ್ವಚ್ಚತಾ ವಾಹಿನಿಯ ಮೂಲಕ ನೀಡಿದರು. 

 ಜಾಥಾದಲ್ಲಿ ಪೋಲಿಸ್ ಠಾಣಾ ಸಿಬ್ಬಂದಿ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ತಾಲೂಕು ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತ್ ಸ್ವಚ್ಚತಾ ವಾಹನಗಳು ಸೇರಿದಂತೆ ಜಾಥಾದಲ್ಲಿ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗ್ರಾಮ‌ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ‌ಒಕ್ಕೂಟದ ಮಹಿಳೆಯರು, ಸ್ವಚ್ಚತಾ ವಾಹನದ ಚಾಲಕರು ಹಾಗೂ ಮಹಿಳಾ ಚಾಲಕಿಯರು, ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

0 Comments