ಕಾಂಗ್ರೆಸ್ ನಿಂದ ದೇಶಕ್ಕೆ ಮತ್ತು ಜನರಿಗೆ ಭದ್ರತೆಯಿಲ್ಲ: ಜಗದೀಶ ಶೇಣವ
ಮೂಡುಬಿದಿರೆ: ಈ ಲೋಕಸಭಾ ಚುನಾವಣೆ ದೇಶದ ಭವಿಷ್ಯತ್ತಿನ ಚುನಾವಣೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದ ವಿಧಾನಸೌಧದ ಒಳಗಡೆಯೇ ಪಾಕಿಸ್ಥಾನ ಜಿಂದಾಬಾದ್ ಎಂಬ ಕೂಗು ಹಾಗೂ ಅವರ ಪಕ್ಷದ ನಾಯಕರ ಮಗಳ ಹತ್ಯೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಕ್ಕೆ ಮತ್ತು ಸಾಮಾನ್ಯ ಜನರಿಗೆ ಭದ್ರತೆಯಿಲ್ಲದಂತ್ತಾಗುತ್ತದೆ ಎಂದು ಬಿಜೆಪಿ ಮುಖಂಡ ಜಗದೀಶ ಶೇಣವ ಹೇಳಿದರು.
ಅವರು ಭಾರತೀಯ ಜನತಾ ಪಾರ್ಟಿ ಮೂಡುಬಿದಿರೆ ನಗರ ಮಹಾ ಶಕ್ತಿಕೇಂದ್ರದ ವತಿಯಿಂದ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರಿಂದ ಭಾರತ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯಿದೆ. ಇದೀಗ ಭಾರತವು ಆರ್ಥಿಕ ಅಭಿವೃದ್ಧಿಯಲ್ಲಿ 5 ನೇ ಸ್ಥಾನದಲ್ಲಿದ್ದು ಮುಂದಿನ 5 ವರ್ಷ ಅಧಿಕಾರದಲ್ಲಿದ್ದರೆ ದೇಶ ಮೂರನೇ ಸ್ಥಾನಕ್ಕೆ ಬಂದು ನಿಲ್ಲುವುದರಲ್ಲಿ ಸಂದೇಹವಿಲ್ಲವೆಂದ ಅವರು ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಮತ ಹಾಕುವ ಮೂಲಕ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಪಟ್ಟಕ್ಕೆ ಏರಿಸಬೇಕಾಗಿದೆ ಎಂದರು.
ಶಾಸಕ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿ ಮಾತನಾಡಿ ರಾಜ್ಯ ಸರಕಾರವು ಈ ಬಾರಿ ಅನುದಾನ ನೀಡದೆ ತಾರತಮ್ಯ ತೋರಿರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲವೆಂದ ಅವರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪರವಾಗಿ ಮತ ಯಾಚಿಸಿದರು.
ಬಾಹುಬಲಿ ಪ್ರಸಾದ್ ಮಾತನಾಡಿ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿರುವ ಕೇಂದ್ರದ ಮೋದಿ ಸರಕಾರವು ಕೊರೋನಾ ಸಂದರ್ಭ ಉಚಿತ ವ್ಯಾಕ್ಸಿನ್, ಆಯುಷ್ಯಾನ್ ಕಾಡ್೯ ಅನುಷ್ಠಾನ, ಬಡವರು, ಶ್ರೀಮಂತರೆಂಬ ತಾರತಮ್ಯ ಮಾಡದೆ ಜನೌಷಧಿ ಕೇಂದ್ರಗಳಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಔಷಧಿಯನ್ನು ನೀಡಿದೆ. ಅಲ್ಲದೆ ಮುದ್ರಾ ಯೋಜನೆಯಲ್ಲಿ ಸಾಲಸೌಲಭ್ಯವನ್ನು ನೀಡಿ ಉದ್ಯೋಗವಂತರನ್ನು ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿ ಬಲ ತುಂಬಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿ ಬಯಲು ಮುಕ್ತ ಶೌಚಾಲಯ ಮಾಡಿದೆ ಆದರೆ ಕಾಂಗ್ರೆಸ್ ಇನ್ನೂ ಚೊಂಬು ಹಿಡಿದುಕೊಂಡು ಬಯಲು ಶೌಚಾಲಯದ ಕಲ್ಪನೆಯಲ್ಲಿದೆ ಎಂದ ಅವರು ಕಾಂಗ್ರೆಸ್ ಕೇಂದ್ರದಲ್ಲಿ ಆಡಳಿತ ಮಾಡುವಾಗ ಹಲವಾರು ಹಗರಣಗಳನ್ನು ಮಾಡುವ ಮೂಲಕ ಭ್ರಷ್ಠಾಚಾರದಲ್ಲಿ ತೊಡಗಿಸಿಕೊಂಡಿತು ಎಂದು ಆರೋಪಿಸಿದರು.
ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಮುಖಂಡರುಗಳಾದ ಸುಚರಿತ ಶೆಟ್ಟಿ,ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಪೂಜಾರಿ, ನಗರ ಮಹಾಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ,ಸೇರಿದಂತೆ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments