ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿ : ಪ್ರತಾಪ್ ಸಿಂಹ ನಾಯಕ್
ಮೂಡುಬಿದಿರೆ: ಭವಿಷ್ಯದಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ತನ್ನ ಗೆಲುವಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಈ ಬಾರಿಯ ಎಂಪಿ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಬುದ್ಧಿ ಕಲಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಕನ್ನಡ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಕಳೆದ ಎಂಪಿ ಚುನಾವಣೆಗಿಂತ ಕನಿಷ್ಟ ೫೦ ಮತಗಳು ಬಿಜೆಪಿಗೆ ಹೆಚ್ಚಿಗೆ ಸಿಕ್ಕರೆ ಬೃಜೇಶ್ ಚೌಟ ಅವರ ಗೆಲುವಿನ ಅಂತರ ೩ ಲಕ್ಷ ದಾಟುವುದರಲ್ಲಿ ಅನುಮಾನ ಇಲ್ಲ.
ಮನೆ ಮನೆಗೆ ಭೇಟಿ ನೀಡಿದ್ದೇನೆಂಬುದಕ್ಕೆ ಸೆಲ್ಪಿ ತೆಗೆದು ಗ್ರೂಪ್‌ಗೆ ಹಾಕಿದರೆ ಸಾಲದು. ಇನ್ನು ಐದು ದಿನ ಪಕ್ಷದ ಎಲ್ಲಾ ಕಾರ್ಯಕರ್ತರು ಕ್ರಿಯಾಶೀಲರಾಗಿ ದುಡಿಯಬೇಕು. ಬಿಜೆಪಿ ಕಾರ‍್ಯಕರ್ತರ ಮನೆಗೆ ಮಾತ್ರವಲ್ಲ, ಕಾಂಗ್ರೆಸ್ ಕಾರ‍್ಯಕರ್ತರ ಮನೆಗೂ ಭೇಟಿ ನೀಡಿ. ಮುಸ್ಲಿಂರು, ಕ್ರೈಸ್ತರ ಮನೆಗೂ ತೆರಳಿ ಮತ ಕೇಳಿ. ಯಾರು ನಿಮಗೆ ಹಸ್ತಲಾಘವ ಮಾಡಿ ಆತ್ಮೀಯತೆಯಿಂದ ಮಾತನಾಡಿಸ್ತಾರೊ ಅವರ ಮತ ಬಿಜೆಪಿಗೆ ಗ್ಯಾರಂಟಿ ಎಂದರ್ಥ. ಹಸ್ತಲಾಘವ ಮಾಡಲು ಹಿಂದೇಟು ಹಾಕುವವರು ಅಥವಾ ಮನಪೂರ್ವಕವಾಗಿ ಹಸ್ತಲಾಘವ ಮಾಡದವರ ಮತ ಬಿಜೆಪಿಗೆ ಅನುಮಾನ ಎಂದರ್ಥ. ಅಂತವರ ಮತ ಸೆಳೆಯಲು ಪ್ರಯತ್ನಿಸಬೇಕು. ಎಂದ ಅವತು ಬಿಜೆಪಿ ಸರಕಾರದ ಯೋಜನೆಯ ಫಲಾನುಭವಿ ಪ್ರತಿ ಮನೆಯಲ್ಲೂ ಇದ್ದಾರೆ ಅವರಿಗೆ ಬಿಜೆಪಿ ಸರಕಾರದ ಸಾಧನೆಗಳನ್ನು ತಿಳಿಸಬೇಕು ಎಂದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಫುಲ ಅವಕಾಶವಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲು ನನಗೆ ಶಕ್ತಿ ನೀಡಿ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಪಕ್ಷದ ಪ್ರಮುಖರಾದ ಸುನಿಲ್ ಆಳ್ವ, ಶಾಂತಿ ಪ್ರಸಾದ್ ಹೆಗ್ಡೆ, ಜಯಂತ್ ಕೋಟ್ಯಾನ್, ಚಂದ್ರಶೇಖರ್ ಬಪ್ಪಳಿಗೆ, ಈಶ್ವರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು. ಪೂರ್ಣಿಮ ಹಳೆಯಂಗಡಿ ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
0 Comments