ಏರಿಳಿತ ತುಟ್ಟಿಭತ್ತೆ ಪಾವತಿಸಲು ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ
ಮೂಡುಬಿದಿರೆ : 2022ರ ಕೊನೆಯಲ್ಲಿ ಉಚ್ಛನ್ಯಾಯಲಯವು ಬೀಡಿ ಕಾರ್ಮಿಕರಿಗೆ ನೀಡಬೇಕಾದ ತುಟ್ಟಿಭತ್ತೆಯನ್ನು ನ್ಯಾಯೋಚಿತವಾಗಿದೆ ಎಂದು ತೀರ್ಪು ನೀಡಿದೆ. ಅದೇ ಸಂದರ್ಭದಲ್ಲಿ ಇನ್ನೊಂದು ತೀರ್ಪು ಮಾಲೀಕರ ಪರವಾಗಿ ಬಂದಿರುತ್ತದೆ. ಬೀಡಿ ಕಾರ್ಮಿಕರಿಗೆ ನ್ಯಾಯೋಚಿತವಾಗಿ ನೀಡಬೇಕಾದ ಏರಿಳಿತ ತುಟ್ಟಿಭತ್ತೆಯನ್ನು ನೀಡಬೇಕು. ಕರ್ನಾಟಕ ರಾಜ್ಯ ಸರಕಾರದ ಮಧ್ಯ ಪ್ರವೇಶ ತೀವ್ರಗೊಳ್ಳಬೇಕಾಗಿದೆ. ನ್ಯಾಯಾಲಯದ ಮತ್ತು ಸರಕಾರದ ಕಾರ್ಮಿಕ ಇಲಾಖೆಗಳ ಮುಖಾಂತರ 2015 ರಿಂದ 2018ರ ತನಕದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಮೊತ್ತವನ್ನು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರಕಾರ ಗಂಭೀರ ಶ್ರಮವಹಿಸಬೇಕೆಂದು ಬೀಡಿ ಫೆಡರೇಷನ್ ನ ಜಿಲ್ಲಾ ಅಧ್ಯಕ್ಷ ವಸಂತ ಆಚಾರಿ ಆಗ್ರಹಿಸಿದರು.
ಅವರು ಬೀಡಿ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಉಡುಪಿ ಮತ್ತು ದ.ಕ.ಜಿಲ್ಲೆ, ಉಚ್ಛ ನ್ಯಾಯಾಲಯದ ತೀರ್ಪಿನಂತೆ ಬೀಡಿ ಕಾರ್ಮಿಕರಿಗೆ 2015-2018ರ ತನಕದ ಏರಿಳಿತ ತುಟ್ಟಿಭತ್ತೆ ಪಾವತಿಸಲು ಒತ್ತಾಯಿಸಿ ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ರಿ)ದ ವತಿಯಿಂದ ಶುಕ್ರವಾರ ತಾಲೂಕು ಆಡಳಿತ ಸೌಧದ ಎದುರು ನಡೆದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿ ಮಾತನಾಡಿದರು.
ಕರ್ನಾಟಕ ರಾಜ್ಯ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಕಾರ್ಮಿಕರು ಬೀಡಿ ಕೈಗಾರಿಕೆಯ ದುಡಿಮೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಮತ್ತಿತರೆ ಕಾನೂನುಬದ್ಧ ಸವಲತ್ತುಗಳು ಬೀಡಿ ಕಾರ್ಮಿಕರ ಹೋರಾಟಗಳ ಮುಖಾಂತರ ಲಭ್ಯವಿದೆ. ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿಯ ಭಾಗವಾಗಿ ಏರಿಳಿತ ತುಟ್ಟಿಭತ್ತೆ ವರ್ಷಂಪ್ರತಿ ಸಿಗುತ್ತಿದೆ. ಆದರೆ 2015ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಬೀಡಿ ಮಾಲಕರು ತಮ್ಮ ಕಾರ್ಮಿಕರಿಗೆ ಏರಿಳಿತ ತುಟ್ಟಿಭತ್ತೆ (VDA) ನೀಡುವುದಕ್ಕೆ ವಿನಾಯಿತಿ ನೀಡಿ ಆದೇಶ ಪತ್ರವನ್ನು ಹೊರಡಿಸಿತು.
ಈ ಆದೇಶ ಪತ್ರವು ಕಾರ್ಮಿಕ ವಿರೋಧಿಯಾಗಿದೆ. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳು ಕಾನೂನು ಸಮರ ಮತ್ತು ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ ರಾಜ್ಯ ಸರಕಾರವು ಈ ಆದೇಶ ಪತ್ರವನ್ನು ವಾಪಾಸು ಪಡೆಯಿತು. ಆದರೆ ಬೀಡಿ ಮಾಲೀಕರು ಈ ಏರಿಳಿತ ತುಟ್ಟಿಭತ್ತೆಯನ್ನು ನ್ಯಾಯೋಚಿತವಾಗಿ ಬೀಡಿ ಕಾರ್ಮಿಕರಿಗೆ ನೀಡಬೇಕಾಗಿದೆ. ಮಾಲಕರು ಅದನ್ನು ನೀಡದೆ, ಕರ್ನಾಟಕ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇದರ ವಿರುದ್ಧ ಬೀಡಿ ಕಾರ್ಮಿಕ ಸಂಘಟನೆಗಳು ನ್ಯಾಯಾಲಯದಲ್ಲಿ ಮತ್ತು ಹೊರಗಡೆ ನಿರಂತರ ಹೋರಾಟ ನಡೆಸುತ್ತಿದೆ.
ಸಿದ್ದರಾಮಯ್ಯ ಸರಕಾರವು ಬೀಡಿ ಕಾರ್ಮಿಕರಿಗೆ ಸಹಕಾರ ನೀಡಿದರೆ ಮುಂದೆಯೂ ತಮ್ಮನ್ನು ಆರಿಸಿ ಕಳುಹಿಸುವೆವು ಅನ್ಯಾಯ ಮಾಡಿದರೆ ಹಿಂದಿನ ಬಿಜೆಪಿ ಸರಕಾರಕ್ಕೆ ಆಗಿರುವ ಪರಿಸ್ಥಿತಿ ನಿಮಗೂ ಆಗಬಹುದು ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಮಾತನಾಡಿ ಹೊಗೆಸೊಪ್ಪು, ಎಲೆ, ನೂಲು ಸೇರಿ ಕೇವಲ ರೂ 497 ಬೀಡಿ ಮಾಲೀಕರಿಗೆ ಖರ್ಚಾಗುತ್ತದೆ. ಆದರೆ 1000 ಬೀಡಿಗೆ ರೂ 900 ಸಿಗುತ್ತದೆ ಆದರೆ ಕಾರ್ಮಿಕರಿಗೆ ಕಿಂಚಿತ್ತ್ ಸಂಬಳಕ್ಕೂ ಸತಾಯಿಸುತ್ತಾರೆ ಇದಕ್ಕೆ ನಾವು ಕೋಟ್೯, ಹೋರಾಟ ಹಾಗೂ ಜಿಲ್ಲಾಡಳಿತದ ಮೂಲಕ ಗಮನ ಸೆಳೆಯಲಿದ್ದೇವೆ ಎಂದು ಎಚ್ಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಮೂಡುಬಿದಿರೆ ವಲಯದ ಅಧ್ಯಕ್ಷ ಸುಂದರ ಶೆಟ್ಟಿ, ಮೂಡುಬಿದಿರೆ ತಾಲೂಕು ಸಂಘದ ಅಧ್ಯಕ್ಷೆ ರಮಣಿ, ಕಾರ್ಯದರ್ಶಿ ರಾಧಾ, ಖಜಾಂಜಿ ಗಿರಿಜಾ, ಪದಾಧಿಕಾರಿಗಳಾದ ಲಕ್ಷ್ಮೀ, ಬೇಬಿ, ಕೃಷ್ಣಪ್ಪ, ಕಲ್ಯಾಣಿ ಮತ್ತಿತರರು ಭಾಗವಹಿಸಿದ್ದರು.
0 Comments