*ಆಧ್ಯಾತ್ಮಿಕ ಜಗತ್ತಿಗೆ ಜೈನ ಮುನಿಗಳ ಕೊಡುಗೆ ಅಪಾರ--ಕೇಮಾರು ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ*
*ಮೂಡುಬಿದಿರೆ: ಜೈನ ಸಮಾಜದ ಮುನಿಗಳು ಕಠಿಣ ವ್ರತ ನಿಯಮಾವಳಿಗಳಿಗೆ,ತ್ಯಾಗಮಯ ಜೀವನಕ್ಕೆ ಕಟಿ ಬದ್ಧರಾಗಿರುವುದರ ಜೊತೆಗೆ ಧರ್ಮೋತ್ಥಾನಕರಾಗಿ,ಕಲಾ ಪ್ರೋತ್ಸಾಹಕರಾಗಿ ಕೂಡ ಆಧ್ಯಾತ್ಮಿಕ ಜಗತ್ತಿಗೆ ಬಹು ದೊಡ್ಡ ಕೊಡುಗೆ ನೀಡುತ್ತಿರುವುದನ್ನು ಯಾರೂ ಮರೆಯಲಾಗದು ಎಂದು ಎಂದು ಕೇಮಾರು ಸಾಂಧೀಪನಿ ಸಾಧನಾಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ನುಡಿದರು. ಅವರು ಮೂಡುಬಿದಿರೆಯ ಶ್ರೀ ಜೈನ ಮಠದ ಶ್ರೀ ಭಟ್ಟಾರಕ ಸಭಾಭವನದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆಗೆ ಪೂರ್ವಭಾವಿಯಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಯಕ್ಷಗಾನ ಕಲಾವಿದರು ಭಗವದ್ಗೀತೆ ,ಪುರಾಣ ಕಥಾನಕಗಳನ್ನು ಸರಿಯಾಗಿ* *ಅಧ್ಯಯನ,ಅಭ್ಯಾಸ ಮಾಡಿ ಶ್ರೋತೃಗಳ ತಲೆಗೆ ಹಾಕಬೇಕೇ ಹೊರತು ಅಲ್ಲಿ ಇಲ್ಲಿ ಕೇಳಿ,ನಾಲ್ಕು ತಾಳಮದ್ದಳೆ ಅರ್ಥ ಕೇಳಿ ಹಾಗೆ ಅದನ್ನು ನಮ್ಮ ತಲೆಗೆ ಹಾಕುವಂತದ್ದು ಸರಿಯಲ್ಲ ಅದು ಶಾಸ್ತ್ರ ಸಮ್ಮತವಾದ ಕಾರ್ಯವೂ ಅಲ್ಲ ಎಂದು ಕಲಾವಿದರುಗಳಿಗೆ ಅವರು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಸಮಾಜದಲ್ಲಿನ ಸಜ್ಜನರಿಂದ ಸಾತ್ವಿಕತೆಗೆ ಬೆಲೆ ಬರುತ್ತದೆ. ಎಲೆಮರೆಯ ಕಾಯಿಯಂತೆ ಇದ್ದು ಯಕ್ಷಗಾನಕ್ಕೆ ಅಪ್ರತಿಮ ಸೇವೆಗೈಯುತ್ತಿರುವ ಕಲಾವಿದರನ್ನು ಗುರುತಿಸಿ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.ಈ ನಿಟ್ಟಿನಲ್ಲಿ ಆ ಬದ್ಧತೆಯಿಂದ ತಮ್ಮ ಮಠವು ಕಲೆಗೆ ಪ್ರೋತ್ಸಾಹವನ್ನು ನಿರಂತರವಾಗಿ ನೀಡುತ್ತಾ ಬಂದಿದೆ.ಈ ಕಾರ್ಯದಲ್ಲಿ ಯಕ್ಷಗಾನ ಸಂಘಟನೆಗಳು ಶ್ರೋತೃಗಳು ಕೂಡ ಮಠದೊಂದಿಗೆ ಕೈ ಜೋಡಿಸಬೇಕೆಂದು ಸ್ವಾಮಿಗಳು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಸಂಘಟಕ,ಶಾಂತಾರಾಮ ಕುಡ್ವ ರೋಟರಿಯನ್ ಸಮಾಜಸೇವಾ ಧುರೀಣ ಲಾಲ್ ಗೋಯೆಲ್,ಸುಧಾಕರ ಶೆಟ್ಟಿ ಪೊಳಲಿ ಭಾಗವಹಿಸಿ ಶುಭ ಹಾರೈಸಿದರು.
ಸಂಜಯನ್ ಕುಮಾರ್ ಸ್ವಾಗತಿಸಿ, ಧನಂಜಯ್ ವಂದಿಸಿದರು.ನಂತರ ಪೊಳಲಿ ಯಕ್ಷಗಾನ ಕಲಾ ಮಂಡಳಿಯ ಸದಸ್ಯರಿಂದ ಕೀರ್ತಿ ಶೇಷ ಬಲಿಪ ನಾರಾಯಣ ಭಾಗವತ ವಿರಚಿತ ಗರುಡ ಗರ್ವಭಂಗ ತಾಳಮದ್ದಳೆ ನೇರವೇರಿತು
0 Comments