ಮೂಡುಬಿದಿರೆಯಲ್ಲಿ ಹೋಮಿಯೋಪಥಿ ರಾಷ್ಟ್ರೀಯ ವಿಚಾರ ಸಂಕಿರಣ
ಮೂಡುಬಿದಿರೆ: ಆಯುರ್ವೇದ, ಹೋಮಿಯೋಪಥಿ, ಯುನಾನಿ ಇತ್ಯಾದಿ ವೈದ್ಯಕೀಯ ಪದ್ಧತಿಯ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆ ಇದೆ ಹೀಗಾಗಿ, ತಪ್ಪು ಗ್ರಹಿಕೆ ಉಂಟಾಗಿದೆ. ಇವುಗಳನ್ನು ಹೋಗಲಾಡಿಸುವುದು ಈ ವೈದ್ಯಕೀಯ ಪದ್ಧತಿ ಅನುಸರಿಸುವವರ ಕರ್ತವ್ಯ. ಸಾಮಾನ್ಯ ಜನರಿಗೂ ಆರೋಗ್ಯ ಕೈಗೆಟಕುವಂತೆ ಮಾಡುವುದು ಆಡಳಿತದ ಆದ್ಯತೆ. ಈ ನಿಟ್ಟಿನಲ್ಲಿ ಹೋಮಿಯೋಪಥಿ ಮತ್ತಿತರ ವೈದ್ಯಕೀಯ ಪದ್ಧತಿ ಜನರಿಗೆ ನೆರವಾಗುತ್ತಿವೆ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪಟ್ಟಣದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ಪ್ರೊವಿನಿಯೋ-23 ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಕನ್ನಡ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವು ಅನುಸರಿಸುವ ವೃತ್ತಿ ಬಗ್ಗೆ ನಮಗೆ ದೃಢ ವಿಶ್ವಾಸವಿರಬೇಕು. ಅದು ಆದ್ಯತೆಯಾಗಬೇಕೇ ಹೊರತು ಪರ್ಯಾಯವಲ್ಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದರು. ಫಾದರ್ ಮುಲ್ಲರ್ ಚಾರಿಟಬಲ್ ಟ್ರಸ್ಟ್ನ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಯೆನೆಪೋಯಾ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಮೊಹಮ್ಮದ್ ಫರ್ಹಾದ್, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್ ಕೆ. ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ರೋಶನ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಆಯೋಜನಾ ಕಾರ್ಯದರ್ಶಿ ಡಾ. ಮೋನಿಕಾ ಲೋಬೊ ವಂದಿಸಿದರು.
ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ತಾನ, ಮಣಿಪುರ, ಗುಜರಾತ್ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಹೋಮಿಯೋಪಥಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಸೇರಿದಂತೆ 1,045 ಪ್ರತಿನಿಧಿಗಳು ಪಾಲ್ಗೊಂಡಿದ್ದರು.
11 ವೈದ್ಯಕೀಯ ಔಷಧಾಲಯ ಪ್ರದರ್ಶನಗಳು, 30ಕ್ಕೂ ಹೆಚ್ಚು ಭಿತ್ತಿಚಿತ್ರಗಳು, 12 ಪ್ರಬಂಧಗಳು ಮಂಡನೆ ನಡೆದವು. ಆಳ್ವಾಸ್ ಹೋಮಿಯೋಪಥಿ ಹಿರಿಯ ವಿದ್ಯಾರ್ಥಿಗಳ ಸಭೆ ನಡೆಯಿತು. 80ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳಿದ್ದರು. ಆಳ್ವಾಸ್ ಸಾಂಸ್ಕೃತಿಕ ತಂಡವು ಪ್ರದರ್ಶನ ನೀಡಿತು. ದೇಶದ ವಿವಿಧೆಡೆಯ 10ಕ್ಕೂ ಹೆಚ್ಚು ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ 120ಕ್ಕೂ ಹೆಚ್ಚು ವೈದ್ಯಕೀಯ ಪ್ರಾಧ್ಯಾಪಕರು ಹಾಗೂ ವೃತ್ತಿಪರರು ಪಾಲ್ಗೊಂಡರು.
ಬಳಿಕ ನಡೆದ ಗೋಷ್ಠಿಯಲ್ಲಿ ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ. ವಿಜಯ ಕೃಷ್ಣ ವಿ, `ತೀವ್ರಸ್ತರ ಕಾಯಿಲೆಗಳಲ್ಲಿ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳ ಸವಾಲುಗಳು ಮತ್ತು ಪರಿಹಾರಗಳು' ಕುರಿತು ಮಾತನಾಡಿದರು.
0 Comments