ಪಡುಮಾರ್ನಾಡು ಗ್ರಾಮ ಸಭೆ:
ಗ್ರಾಮಸ್ಥರಿಂದ ವಿವಿಧ ಚರ್ಚೆಗಳು
ಮೂಡುಬಿದಿರೆ : ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಅರ್ಜಿ ಸಲ್ಲಿಸಿದರೆ ಸಲ್ಲಿಸಲಾಗದಷ್ಟು ದಾಖಲೆ ಕೇಳುತ್ತಾರೆ. ಸ್ವಂತ ಗೂಡಂಗಡಿ ಮಾಡೋಣವೆಂದರೆ ಪಂಚಾಯತ್ ಪರವಾನಗಿ ನೀಡುವುದಿಲ್ಲ. ಪರವಾನಗಿ ಇಲ್ಲದಿದ್ದರೆ ಬ್ಯಾಂಕ್ ಸಾಲ ನೀಡುವುದಿಲ್ಲ ಎಂದು ಗ್ರಾಮಸ್ಥರಾದ ನವೀನ್ ಸಹಿತ ಹಲವರು ಪಡುಮಾರ್ನಾಡು ಗ್ರಾಮಸಭೆಯಲ್ಲಿ ಅಲವತ್ತುಕೊಂಡಿದ್ದಾರೆ.
ಮಂಗಳವಾರ ಪಂಚಾಯತ್ ಅಧ್ಯಕ್ಷೆ ಕಲ್ಯಾಣಿ ಸಿ.ಎಸ್.ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರತಿ ಅವರು ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಗ್ರಾಮಸ್ಥರಿಗೆ ಸಿಗದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಈ ಯೋಜನೆಯಿಂದ ಪ್ರಸಕ್ತ ವರ್ಷದಲ್ಲಿ ಎಷ್ಟು ಫಲಾನುಭವಿಗಳಿಗೆ ಸಾಲ ದೊರೆತಿದೆ ಎಂಬ ಬಗ್ಗೆ ಅಂಕಿ ಅಂಶಗಳನ್ನು ನೀಡುವಂತೆ ಒತ್ತಾಯಿಸಿದರು.
ಇಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಹಿಂದಿಯವರೇ ತುಂಬಿಕೊಂಡಿದ್ದಾರೆ. ಅವರಿಗೆ ನಮ್ಮ ಭಾಷೆ ಅರ್ಥವಾಗುವುದಿಲ್ಲ. ಅವರ ಭಾಷೆ ನಮಗೆ ಅರ್ಥವಾಗುವುದಿಲ್ಲ. ಹೀಗಾಗಿ ಯಾವ ಸಾಲ ಸೌಲಭ್ಯವೂ ಜನರಿಗೆ ಸಿಗುತ್ತಿಲ್ಲ. ಮಾಹಿತಿ ನೀಡಿ ಏನು ಪ್ರಯೋಜನ ಎಂದು ದಯಾನಂದ ಹೆಗ್ಡೆ ಪ್ರಶ್ನಿಸಿದರು. ಅಧಿಕಾರಿಗಳು ನೀಡಿದ ಮಾಹಿತಿಯನ್ನು ದಾಖಲೀಕರಿಸಿ ಅದರ ಪ್ರಯೋಜನ ಜನರಿಗೆ ಸಿಗುವಂತೆ ಮಾಡಿ ಎಂದು ಪಂಚಾಯತ್ ಗೆ ಸಲಹೆ ನೀಡಿದರು.
ಮುಂದಿನ ಗ್ರಾಮಸಭೆಗಳಲ್ಲಿ ಈ ಬಗ್ಗೆ ಅಂಕಿ ಅಂಶವನ್ನು ನೀಡುವುದಾಗಿ ಪಿಡಿಒ ಉಗ್ಗಪ್ಪ ಮೂಲ್ಯ ಭರವಸೆಯನ್ನು ನೀಡಿದರು.
ಪಡುಮಾರ್ನಾಡು ಪಂಚಾಯತ್ ನಲ್ಲಿ ವಿಎ ಮತ್ತು ಪಿಡಿಒ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಬೇರೆ ಪಂಚಾಯತ್‌ನಲ್ಲಿಯೂ ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಪಂಚಾಯತ್ ಗೆ ಪೂರ್ಣಾವಧಿಗೆ ವಿಎ ಮತ್ತು ಪಿಡಿಒ ಅವರನ್ನು ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಬನ್ನಡ್ಕದಲ್ಲಿ ನಮ್ಮ ಮನೆಗಳ ಮೇಲೆ ೧೧ ಕೆವಿ ಹೆಚ್‌ಟಿ ಲೈನ್ ಹಾದು ಹೋಗಿದೆ. ಅದರ ಅಡಿಯಲ್ಲೇ ಅರಣ್ಯ ಇಲಾಖೆ ಸಸಿ ನೆಟ್ಟು ಬೆಳೆಸಿದೆ ಪರಿಣಾಮವಾಗಿ ಕಳೆದ ಬೇಸಿಗೆಯಲ್ಲಿ ವಿದ್ಯುತ್ ಲೈನ್‌ನಿಂದ ಬೆಂಕಿ ತಗುಲಿ ಅಪಾಯದ ಸ್ಥಿತಿ ನಿರ್ಮಾಣವಾಗಿದ್ದು ನಾವು ಆತಂಕದಿಂದ ಬದುಕುತ್ತಿದ್ದೇವೆ. ಹೆಚ್ ಟಿ ಮಾರ್ಗವನ್ನು ಬದಲಿಸಬೇಕೆಂದು ಆ ಪರಿಸರದ ನಾಗರಿಕರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಪಿಡಿಒ ಈ ಕುರಿತು ಮೆಸ್ಕಾಂ ಗೆ ಪತ್ರ ಬರೆದಿದ್ದು, ಮೆಸ್ಕಾಂ ಪಂಚಾಯತ್ ಮೇಲೆ ಹೊಣೆಹೊರಿಸಿದೆ ಎಂದು ಸಭೆಗೆ ತಿಳಿಸಿ ಈ ಕುರಿತು ಮೆಸ್ಕಾಂನ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು. ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್ ನೋಡಲ್ ಅಧಿಕಾರಿ ರಾಜಶ್ರೀ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
0 Comments