ಬಾಕಿ ಇರುವ ತುಟ್ಟಿಭತ್ತೆಯನ್ನು ನೀಡಲು ಆಗ್ರಹಿಸಿ ಮೂಡುಬಿದಿರೆಯಲ್ಲಿ ಪ್ರತಿಭಟನೆ

 ಬಾಕಿ ಇರುವ ತುಟ್ಟಿಭತ್ತೆಯನ್ನು  ನೀಡಲು ಆಗ್ರಹಿಸಿ ಮೂಡುಬಿದಿರೆಯಲ್ಲಿ ಪ್ರತಿಭಟನೆ




ಮೂಡುಬಿದಿರೆ: ಬೀಡಿ ಕಾರ್ಮಿಕರಿಗೆ 2015ರಿಂದ 2018ರ ತನಕ ಮೂರು ವರ್ಷಗಳ ಬಾಕಿ ಇರುವ ತುಟ್ಟಿ ಭತ್ತೆ ಮೊತ್ತವನ್ನು ನೀಡಲು ಒತ್ತಾಯಿಸಿ ಮತ್ತು 2018ರಿಂದ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ಕೂಲಿ ಪಾವತಿಗಾಗಿ ಆಗ್ರಹಿಸಿ ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘದ ವತಿಯಿಂದ  ಸೌತ್ ಕೆನರಾ ಹೋಂ ಇಂಡಸ್ಟ್ರೀಸ್, ಮೂಡುಬಿದಿರೆ ಡಿಪೋ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.

ಬೀಡಿ ಫೆಡರೇಶನ್ ನ ಜಿಲ್ಲಾಧ್ಯಕ್ಷ  ವಸಂತ ಆಚಾರಿ ಪ್ತತಿಭಟನೆಯನ್ನುದ್ದೇಶಿಸಿ ಮಾತನಾಡಿ 2015ರಲ್ಲಿ ರಾಜ್ಯ ಸರಕಾರವು ಬೀಡಿ ಮಾಲಿಕರು ತುಟ್ಟಿಭತ್ತೆ ನೀಡುವುದಕ್ಕೆ ವಿನಾಯಿತಿ ನೀಡಿ ಆದೇಶ ಪತ್ರವನ್ನು ಹೊರಡಿಸಿತು. ಇದರ ವಿರುದ್ಧ ಸಿಐಟಿಯು ನೇತೃತ್ವದ ಸೌತ್ ಕೆನರಾ ಬೀಡಿ ವರ್ಕಸ್೯ ಫೆಡರೇಶನ್ ನೇತೃತ್ವದಲ್ಲಿ ಬೀಡಿ ಕಾರ್ಮಿಕರು ತೀವೃ ತರದ ಹೋರಾಟವನ್ನು ನಡೆಸಿದ ಪರಿಣಾಮವಾಗಿ ರಾಜ್ಯ ಸರಕಾರವು ಕಾರ್ಮಿಕ ವಿರೋಧಿ ಆದೇಶ ಪತ್ರವನ್ನು ವಾಪಾಸು ಪಡೆಯಿತು. ಆದರೆ ಬೀಡಿ ಮಾಲಿಕರು ಇದರ ವಿರುದ್ಧ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇದರ ವಿರುದ್ಧ ಕಾರ್ಮಿಕ ಸಂಘಟನೆಗಳಿಂದ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಿ ಸರಕಾರದ ಆದೇಶವನ್ನು ಎತ್ತಿ ಹಿಡಿಯಲಾಯಿತು. ಇದರಿಂದಾಗಿ ಬೀಡಿ ಮಾಲೀಕರು ಕಾರ್ಮಿಕರಿಗೆ 2015ರಿಂದ ಪ್ರತಿ ಸಾವಿರ ಬೀಡಿಗೆ ರೂ 12.75 ರಂತೆ ತುಟ್ಟಿ ಭತ್ತೆಯನ್ನು ನೀಡಲು ನೀಡಲು ಆದೇಶ ನೀಡಿದೆ. ಆದುದರಿಂದ ಬೀಡಿ ಮಾಲಿಕರು 2015ರಿಂದ 3 ವರ್ಷಗಳಿಂದ ನೀಡಲು ಬಾಕಿ ಇರುವ ತುಟ್ಟಿ ಭತ್ತೆಯನ್ನು ಲೆಕ್ಕಹಾಕಿ ನೀಡಬೇಕೆಂದು ಆಗ್ರಹಿಸಿದರು.



  ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿದರು.

ಮೂಡುಬಿದಿರೆ ಪ್ರದೇಶ ಬೀಡಿ ಕೆಲಸಗಾರರ ಸಂಘ(ರಿ) ಇದರ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಗಿರಿಜಾ, ರೈತ ಸಂಘದ ಮೂಡುಬಿದಿರೆ ಅಧ್ಯಕ್ಷ ಸುಂದರ ಶೆಟ್ಟಿ, ಸಿಐಟಿಯುನ ಮೂಡುಬಿದಿರೆ ಅಧ್ಯಕ್ಷ ಶಂಕರ್, ಪದಾಧಿಕಾರಿಗಳಾದ ಕೃಷ್ಣಪ್ಪ, ಜಲಜ, ಕಲ್ಯಾಣಿ, ಬೇಬಿ ಹಾಗೂ ಬೀಡಿ ಕಾರ್ಮಿಕರು ಭಾಗವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ರಾಧ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement