ಪುತ್ತಿಗೆ ಗ್ರಾಮದಲ್ಲಿ ಪದೇ ಪದೇ ಗ್ರಾಮಕರಣಿಕರರ ಬದಲಾವಣೆ : ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಪುತ್ತಿಗೆ ಗ್ರಾಮದಲ್ಲಿ ಪದೇ ಪದೇ ಗ್ರಾಮಕರಣಿಕರರ ಬದಲಾವಣೆ : ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ



ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮಕರಣೀಕರರನ್ನು ಪದೇ ಪದೇ ದಿಢೀರ್ ಆಗಿ ಬದಲಾಯಿಸುತ್ತಿರುವುದರಿಂದ  ಜನಸಾಮಾನ್ಯರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆದರೆ ವಿರೋಧಿಸಿ  ಪ್ರತಿಭಟನೆ ನಡೆಸುವುದಾಗಿ  ಪುತ್ತಿಗೆಯ ಗ್ರಾಮಸ್ಥ, ಸಾಮಾಜಿಕ ಹೋರಾಟಗಾರ ಮಿತ್ತಬೈಲು ವಾಸುದೇವ ನಾಯಕ್ ಎಚ್ಚರಿಸಿದ್ದಾರೆ.


ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪುತ್ತಿಗೆಯ ಗ್ರಾಮಸ್ಥರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 6 ತಿಂಗಳ ಅವಧಿಯಲ್ಲಿ ನಾಲ್ವರು ಗ್ರಾಮಕರಣೀಕರನ್ನು ವರ್ಗಾವಣೆಗೊಳಿಸಿ ಇದೀಗ 2 ದಿನಗಳ ಹಿಂದೆ 5ನೇಯವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮೂಡುಬಿದಿರೆ ತಹಶೀಲ್ದಾರ್‌ರಿಗೆ ಮನವಿ ಪತ್ರದೊಂದಿಗೆ ತಿಳಿಸಲಾಗಿದ್ದರೂ ಗ್ರಾಮಕರಣೀಕರ ವರ್ಗಾವಣೆ ನಿಲ್ಲುತ್ತಿಲ್ಲ ಎಂದು ಆರೋಪಿಸಿದ ಅವರು ಸಹಾಯಕ ವಿಭಾಗಾಧಿಕಾರಿಯವರ ಗಮನಕ್ಕೂ ವಿಷಯವನ್ನು ಮನವರಿಕೆಗೊಳಿಸಲಾಗಿದೆ ಎಂದರು.

ಗ್ರಾಮದ ಬಡಜನರಿಗೆ ಅಧಿಕಾರಿಗಳ ಈ ಕ್ರಮದಿಂದಾಗಿ ತುಂಬಾ ತೊಂದರೆಯಾಗುತ್ತಿದ್ದು ಸರಕಾರಿ ಕೆಲಸ ವಿಳಂಬವಾಗುತ್ತಿದೆ ಮಾತ್ರವಲ್ಲದೆ ಭ್ರಷ್ಟಾಚಾರಕ್ಕೂ ಪರೋಕ್ಷವಾಗಿ ಅವಕಾಶ ನೀಡಿದಂತ್ತಾಗುತ್ತದೆ ಎಂದು ಆರೋಪಿಸಿದರು.


ತಾಲೂಕು ಕಚೇರಿಯಲ್ಲಿ ಕೂಡ ಮೇಜಿನಿಂದ ಮೇಜಿಗೆ ಯಾವುದೇ ಕಡತ ಮುಂದುವರಿಯಬೇಕಾದರೂ ಕಡತಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರತಿಯೊಬ್ಬ ಅಧಿಕಾರಿಗಳ ಬಳಿಗೆ ಹೋಗಲೇಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕಡತಗಳು ಆಯಾ ಸ್ಥಳಗಳಲ್ಲೇ ಸ್ಥಗಿತಗೊಳ್ಳುತ್ತವೆ ಎಂದು ಕೂಡ ಅವರು ಆರೋಪಿಸಿದರು.


ಈ ಹಿಂದೆ ಗ್ರಾಮಕರಣೀಕರಾಗಿದ್ದ ಶ್ರೀನಿವಾಸ್‌ರನ್ನು ಚುನಾವಣೆ ಕಾರಣದಿಂದ ವರ್ಗಾವಣೆಗೊಳಿಸಲಾಗಿದ್ದರೂ ಅವರು ಮರಳಿ ನಿಯುಕ್ತಿಗೊಂಡಿಲ್ಲ. ನಂತರ ಬಂದ ದೀಪಿಕಾ, ಸುಹಾಸಿನಿ, ದೀಪ್ತಿಯವರನ್ನು ವರ್ಗಾವಣೆಗೊಳಿಸಿ ಇದೀಗ ಇರುವೈಲು ಗ್ರಾಮದಲ್ಲಿ ಗ್ರಾಮಕರಣೀಕರಾಗಿದ್ದ ಗಾಯತ್ರಿಯವರನ್ನು ಗ್ರಾಮಕರಣೀಕರಾಗಿ 2 ದಿನಗಳ ಹಿಂದೆ ನಿಯುಕ್ತಿಗೊಳಿಸಲಾಗಿದೆ. ಗ್ರಾಮಕರಣೀಕರನ್ನು ಈ ಗ್ರಾಮದಲ್ಲಿ ಪೂರ್ಣಕಾಲೀಕವಾಗಿ ಗ್ರಾಮದ ಜನರಿಗೆ ಸೇವೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥರು ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯ ಪುರುಷೋತ್ತಮ ನಾಯಕ್ ಪತ್ರಿಕಾಗೋಷ್ಠಿಯಲ್ಲಿದ್ದರು.

Post a Comment

0 Comments