ಮೂಡುಬಿದಿರೆ: ಇಲ್ಲಿನ ಆಲಂಗಾರಿನಲ್ಲಿ ನೂತನವಾಗಿ ಆರಂಭಗೊಂಡ ಆರ.ಆರ್.ಫ್ಯಾಶನ್ ಇಂಡಸ್ಟ್ರೀಸ್ ಮಳಿಗೆಯನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಭಾನುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಅತೀ ವೇಗದಲ್ಲಿ ಬೆಳೆಯುತ್ತಿರುವ ನಗರ ಮೂಡುಬಿದಿರೆ. ಜೈನ ಕಾಶಿ, ವಿದ್ಯಾಕಾಶಿ, ಸಾಂಸ್ಕ್ರತಿಕ ಕಾಶಿ ಎಂದು ಗುರುತಿಸಿಕೊಂಡಿರುವ ಇಲ್ಲಿ ಅಭಿವೃದ್ಧಿಯ ವಿವಿಧ ಯೋಜನೆಗಳು ಯಶಸ್ವಿಯಾಗಿ ಸಾಗುತ್ತಿದೆ.ಇದರ ಜತೆಗೆ ಇದೀಗ ಈ ಕ್ಷೇತ್ರದಲ್ಲಿ ಆರ್.ಆರ್.ಫ್ಯಾಶನ್ ಇಂಡಸ್ಟ್ರೀಸ್ ಬಂದಿರುವುದೂ ಸಂತಸ ನೀಡಿದೆ.
ಈ ಸಂಸ್ಥೆಯು ಮೂಡುಬಿದಿರೆಯಲ್ಲಿ ಆರಂಭಗೊಂಡಿರುವುದರಿಂದ ಇಲ್ಲಿನ ಪರಿಸರದ ಜನರಿಗೆ ಉದ್ಯೋಗದ ಅವಕಾಶಗಳು ಸಿಗುತ್ತದೆ. ಯಾವುದೇ ಒಂದು ಉದ್ಯಮ ಬೆಳೆಯಬೇಕಾದರೆ ಶ್ರದ್ದೆ, ಕಾರ್ಯಚಟುವಟಿಕೆ ಉತ್ತಮ ಕ್ವಾಲಿಟಿಗಳು ಮುಖ್ಯ. ಈ ಎಲ್ಲಾ ಗುಣಗಳನ್ನು ಈ ಸಂಸ್ಥೆಯು ಮೈಗೂಡಿಸಿಕೊಂಡಿರುವುದರಿಂದ ಸಮಯಕ್ಕೆ ಸರಿಯಾಗಿ ಬಟ್ಟೆಗಳನ್ನು ಒದಗಿಸುತ್ತಿರುವುದರಿಂದ ಯಶಸ್ವಿಯಾಗಿ ಬೆಳೆಯಲು ಸಹಕಾರಿಯಾಗಿದೆ ಎಂದ ಅವರು ಶುಭ ಹಾರೈಸಿದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸುಸಜ್ಜಿತವಾದ ಕಟ್ಟಡದಲ್ಲಿ ಆರಂಭಗೊಂಡ ಉದ್ಯಮದಲ್ಲಿ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗ ದೊರೆತಿದೆ ಮುಂದೆ ಇನ್ನೂ ಹೆಚ್ಚಿನ ಕಾರ್ಮಿಕರಿಗೆ ಉದ್ಯೋಗ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕರ್ನಾಟಕ ಬ್ಯಾಂಕಿನ ಜಿ.ಎಂ.ರವಿಚಂದ್ರನ್ ಎಸ್,
ಪುರಸಭಾ ಸದಸ್ಯ ಪಿ.ಕೆ.ಥೋಮಸ್, ನಮ್ಮ ಕುಡ್ಲ ಚಾನೆಲ್ ನ ಮುಖ್ಯಸ್ಥ ಲೀಲಾಧರ್ ಕರ್ಕೇರಾ, ಉದ್ಯಮಿ ಪ್ರಭಾತ್ ಚಂದ್ರ ಜೈನ್, ಎಂಜಿನಿಯರ್ ವೀರೇಂದ್ರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಸ್ಥರಾದ ರಮನಾಥ ಎಂ.ಕೋಟ್ಯಾನ್, ರಾಜೇಶ್ ಎಂ.ಕೋಟ್ಯಾನ್, ಜಯಪ್ರಸಾದ್ ಎಂ.ಕೋಟ್ಯಾನ್ ದಂಪತಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಂಸ್ಥೆಯ ಮುಖ್ಯಸ್ಥರ ಹೆತ್ತವರಾದ ರತ್ನಾ ಮುತ್ತಯ್ಯ ಪೂಜಾರಿ ಕಟ್ಟಡವನ್ನು ಉದ್ಘಾಟಿಸಿದರು.
ನಿತೇಶ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿ,ರಮನಾಥ್ ಎಂ.ಕೋಟ್ಯಾನ್ ಧನ್ಯವಾದಗೈದರು.
0 Comments