ಸೇವೆಯ ಮೂಲಕ ವ್ಯಕ್ತಿತ್ವ ನಿರ್ಮಾಣವೇ ರಾಷ್ಟ್ರೀಯ ಸೇವಾ ಯೋಜನೆಯ ಆಶಯ : ಕೆ. ಅಭಯಚಂದ್ರ ಜೈನ್
ಮೂಡುಬಿದಿರೆ:ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಮೂಡುಬಿದಿರೆ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೋರುಗುಡ್ಡೆ, ನೆಲ್ಲಿಕಾರು ಇಲ್ಲಿ ಆರಂಭಗೊಂಡಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಕೇವಲ ಶಿಬಿರವನ್ನು ನಡೆಸುವುದಲ್ಲ; ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಸಾರ್ಥಕ ವೇದಿಕೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೇ ಮರಳಿಸುವ ಮನೋಭಾವ ಯುವಜನರಲ್ಲಿ ಮೂಡಿದಾಗ ಮಾತ್ರ ಶಿಕ್ಷಣ ತನ್ನ ನಿಜವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಗ್ರಾಮೀಣ ಬದುಕಿನೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಸ್ಪಂದಿಸುವ ಅನುಭವ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಮೃದ್ಧಗೊಳಿಸುತ್ತದೆ” ಎಂದು ಹೇಳಿದರು.
ಎಕ್ಸಲೆಂಟ್ ಮೂಡುಬಿದಿರೆ ಆಡಳಿತ ನಿರ್ದೇಶಕರಾದ ಡಾ. ಬಿ.ಪಿ. ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜದ ನೈಜ ಬದುಕಿನತ್ತ ಕರೆದೊಯ್ಯುವ ಶೈಕ್ಷಣಿಕ ಪ್ರಕ್ರಿಯೆಯಾಗಿದೆ. ಸೇವೆಯ ಮೂಲಕ ಶ್ರಮದ ಮಹತ್ವ, ಸಹಬಾಳ್ವೆಯ ಮೌಲ್ಯ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಈ ಶಿಬಿರ ಉತ್ತಮ ಅವಕಾಶ. ಇಲ್ಲಿ ಕಲಿಯುವ ಪ್ರತಿಯೊಂದು ಅನುಭವವೂ ಅವರ ಮುಂದಿನ ಬದುಕಿಗೆ ದಾರಿದೀಪವಾಗಬೇಕು” ಎಂದರು.
ಶ್ರೀ ಚಾಮುಂಡಿ ದೇವಸ್ಥಾನದ ಆನುವಂಶಿಕ ಆಡಳಿತ ಮುಖ್ಯಸ್ಥರಾದ ಮಹಾವೀರ ಹೆಗ್ಡೆ ಬಡಕೋಡಿಗುತ್ತು, ಪಿಡಬ್ಲ್ಯುಡಿ ಗುತ್ತಿಗೆದಾರರಾದ ಮಧ್ವರಾಜ್ ಜೈನ್, ನೆಲ್ಲಿಕಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಉದಯ ಪೂಜಾರಿ, ಸತ್ಯಪುರ ಸತ್ಯನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಜಯಂತ ಹೆಗ್ಡೆ, ಬೋರುಗುಡ್ಡೆ ದ. ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಮುಖ್ಯ ಶಿಕ್ಷಕಿ ಸುಜಾತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಕೆ., ಊರಿನ ಪ್ರಮುಖರಾದ ಸುಂದರ ಹೆಗ್ಡೆ ಹಾಗೂ ಪಿಜಿನ ಪೂಜಾರಿ, ವಿದ್ಯಾರ್ಥಿ ನಾಯಕ ಅದಿತ್ ಉಪಸ್ಥಿತರಿದ್ದರು.
ಶಿಬಿರದ ನಾಯಕರುಗಳಾದ ನಂದನ್ ಹಾಗೂ ಹಿಮಾನಿ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಅಶೋಕ್. ಪಿ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಶಾಂತ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕ ವಿಶೇಷ ಶಿಬಿರದ ಅವಧಿಯಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಸಮುದಾಯದೊಂದಿಗೆ ಬೆರೆತು ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದು, ಸ್ವಚ್ಛತೆ, ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ, ಶ್ರಮದಾನ ಹಾಗೂ ಸಾರ್ವಜನಿಕ ಬದುಕಿನ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ಅನುಭವವನ್ನು ಪಡೆಯಲಿದ್ದಾರೆ. ಈ ಮೂಲಕ “ನನಗಲ್ಲ ನಿನಗೆ” ಎಂಬ ರಾಷ್ಟ್ರೀಯ ಸೇವಾ ಯೋಜನೆಯ ಮೂಲಮಂತ್ರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಶಿಬಿರ ಸಾಕ್ಷಿಯಾಗಲಿದೆ.

0 Comments