ಮೂಡುಬಿದಿರೆ : ಪಿಎಂ ಜನಮನ್ ಯೋಜನೆಯಡಿ ಜಿಲ್ಲೆಯ ಪ್ರತಿ ಕೊರಗ ಕುಟುಂಬಗಳಿಗೂ ಮನೆ ಒದಗಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸುವಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೧೧೩೫ ಕೊರಗ ಕುಟುಂಬಗಳಿದ್ದು, ಪಿಎಂ ಜನ್‌ಮನ್‌ನಡಿ ಮ್ಯಾಪಿಂಗ್ ಕಾರ್ಯ ನಡೆದಿದೆ. ಪಿಎಂ ಜನ ಮನ ಸೇರಿದಂತೆ ವಿವಿಧ ಯೋಜನೆಗಳಡಿ ೧೬೫ ಫಲಾನುಭವಿಗಳ ಅರ್ಜಿ ವಿಲೇ
ಪ್ರಕ್ರಿಯೆ ನಡೆದಿದ್ದು, ೧೨೪ ಅರ್ಜಿಗಳು ಮಂಜೂರಾತಿಗೆ ಬಾಕಿ ಇವೆ. ಹಣಕಾಸಿನ ಸಮಸ್ಯೆ ಇಲ್ಲವಾಗಿದ್ದು, ಮಂಜೂರಾತಿ ದೊರೆತವರೂ ಕೆಲವರು ಮನೆ ಕಟ್ಟಲು ಮುಂದಾಗುತ್ತಿಲ್ಲ ಎಂದು ಐಟಿಡಿಪಿ ಅಧಿಕಾರಿ ಬಸವರಾಜು ಅವರು ಸಭೆಗೆ ಮಾಹಿತಿ ನೀಡಿದರು.
೪.೫ ಲಕ್ಷ ರೂ. ಘಟಕ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಾಗದು ಅವರಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯರಾದ ಭರತ್ ಕುಮಾರ್
ಆಗ್ರಹಿಸಿದಾಗ ಈ ಬಗ್ಗೆ ಸರಕಾರ ಮಟ್ಟದಲ್ಲಿ ಮಾತುಕತೆ ಆಗಬೇಕಾಗಿದೆ ಎಂದು ಸಂಸದರು ತಿಳಿಸಿದರು.
ತಾಂತ್ರಿಕ ಸಮಸ್ಯೆ..
ವಿಬಿಜಿ ರಾಮ್ ಜಿ ಯೋಜನೆ ತಾಂತ್ರಿಕ ಸಮಸ್ಯೆಯಿಂದ ಲಾಗಿನ್‌ಗೆ ಆರಂಭದಲ್ಲಿ ವಿಳಂಬವಾಗಿದ್ದು, ಸದ್ಯ ವೇಗ ಪಡೆಯುತ್ತಿದೆ. ಯೋಜನೆಯಡಿ ೯೦೦೦ ತೋಟಗಾರಿಕಾ ಕಾಮಗಾರಿಗಳು ಸೇರಿದಂತೆ ೧೮೦೦೦ ಕಾಮಗಾರಿಗಳು ಜಿಲ್ಲೆಗೆ ಮಂಜೂರಾಗಿದ್ದು, ೧೫ ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿದೆ. ಕಳೆದ ವರ್ಷ ನರೇಗಾದಡಿ ೧೦ ಲಕ್ಷ ಮಾನವ ದಿನಗಳ ಗುರಿಯಡಿ ೯ ಲಕ್ಷ ಮಾನವ ದಿನಗಳ ಸೃಜನೆಯಾಗಿದೆ ಎಂದು ಜಿ.ಪಂ. ಸಿಇಒ ವಿನಾಯ ಕರ್ಭಾರಿ ವಿವರ ನೀಡಿದರು.
ಹೊಸ ನಿಲ್ದಾಣ..
ಮಂಗಳೂರು ಕುಳೂರು ರೈಲು ಜಾಲವು ಪಾಲ್ಘಾಟ್‌ನಿಂದ ಬೇರ್ಪಟ್ಟು ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಆದೇಶವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಾಕಷ್ಟುಅಭಿವೃದ್ದಿ ಕಾರ್ಯಗಳಿಗೆ ಅವಕಾಶವಿದೆ. ಜೋಕಟ್ಟೆಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಮೀಪದ ರೈಲು ಮಾರ್ಗದಲ್ಲಿ ಹೊಸ ನಿಲ್ದಾಣ ರಚನೆಗೆ ಅಗತ್ಯ ಕ್ರಮ ವಹಿಸುವಂತೆ ಸ್ಥಳೀಯ ಆಡಳಿತದ ಜನಪ್ರತಿನಿಧಿಗಳ ಜತೆ ಸಂಪರ್ಕ ಬೆಳೆಸಿ ಯೋಜನೆ ರೂಪಿಸುವಂತೆ ದಕ್ಷಿಣ ರೈಲ್ವೇ ಅಧಿಕಾರಿಗಳಿಗೆ ಸಂಸದರು ಸಲಹೆ ನೀಡಿದರು.

0 Comments