ಮೂಡುಬಿದಿರೆಯ ಪಣಪಿಲ ಗ್ರಾಮದ ನಂದೊಟ್ಟು ಬಳಿಯ ಬಿರ್ಮೆರೆ ಬೈಲ್ ಎಂಬಲ್ಲಿ ಇರುವ ಪುರಾತನ ನಾಗಬ್ರಹ್ಮ ಸ್ಥಾನದ ಶಿಲನ್ಯಾಸ ಕಾರ್ಯಕ್ರಮವು 27 ಆಗಸ್ಟ್ ಗುರುವಾರದಂದು ನಡೆಯಿತು. ಸುಮಾರು ನಾಲ್ಕುನೂರು ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇರುವ ಗ್ರಾಮಕ್ಕೆ ಪ್ರಧಾನ ಶಕ್ತಿಯಾಗಿರುವ ನಾಗಬ್ರಹ್ಮ, ಜುಮಾದಿ, ಲೆಕ್ಕೆಸಿರಿ, ನಂದಿಗೋಣ, ಸಿರಿಗಳು ಮತ್ತು ಪರಿವಾರ ಶಕ್ತಿಗಳ ಆಲಯವು ಸುಮಾರು ನೂರು ವರ್ಷಗಳ 60-70 ವರ್ಷಗಳಿಂದೀಚೇ ನಶಿಸಿ ಹೋಗುತ್ತಿತ್ತು. ನಾಗ ದೇವರ ಬನ ಹೊರತಾಗಿ ಉಳಿದೆಲ್ಲವೂ ಶಿಥಿಲಗೊಂಡಿದ್ದು ಈ ಕ್ಷೇತ್ರವನ್ನು ಮತ್ತೊಮ್ಮೆ ಜೀರ್ಣೋದ್ಧಾರಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಿಂದಿನ ಕಾಲದಲ್ಲಿ ಬೈ ಹುಲ್ಲಿನ ಗುಡಿಸಲು ರೀತಿಯ ಬ್ರಹ್ಮ ಸ್ಥಾನಗಳಿದ್ದರೂ ಕೂಡ ಪಣಪಿಲ ಅರಮನೆಯ ಮುತುವರ್ಜಿಯಿಂದ ಪಣಪಿಲ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆಯೇ ಹಂಚಿನ ದಂಬೆ ಕಟ್ಟಿದ ಬ್ರಹ್ಮ ಸ್ಥಾನ ಇರುವುದು ನಮ್ಮ ಹಿರಿಮೆಯಾಗಿದೆ. ಇದು ಪಣಪಿಲ ಅರಮನೆಗೆ ಸಂಬಂಧಪಟ್ಟರುವುದರಿಂದ ಅರಮನೆಯವರು ಈ ಮಂದಿರವನ್ನು ನಿರ್ಮಿಸಿದ್ದರು ಎಂದು ಪ್ರಧಾನ ಅರ್ಚಕರಾದ ಶ್ರೀ ಮುರಳಿ ಕೃಷ್ಣ ಭಟ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಆಲಯಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ ವಿಮಲ್ ಕುಮಾರ್ ಶೆಟ್ಟಿಯವರು ಮಂದಿರ ನಿರ್ಮಾಣಕ್ಕೆ ವಿಜ್ಞಾಪನ ಪತ್ರವನ್ನು ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಯುವರಾಜ್ ಜೈನ್ ನಂದೊಟ್ಟು, ಹರ್ಷೇಂದ್ರ ಜೈನ್ ಮಜಲೋಡಿ ಗುತ್ತು , ನೀಲಯ್ಯ ಮೂಲ್ಯ, ರಮಾನಾಥ್ ಸಾಲ್ಯಾನ್ ವಿ.ಎಸ್., ಗ್ರಾಮ ಪಂಚಾಯತಿ ಸದಸ್ಯರಾದ ಮುನಿರಾಜ್ ಹೆಗ್ಡೆ, ಸಚಿನ್ ಜೈನ್ ಪುತ್ರೊದ್ದು, ಕಾರ್ಯದರ್ಶಿ ವಸಂತ್ ಕುಲಾಲ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷರಾದ ರಾಮಪ್ಪ ಮೂಲ್ಯ ರವರು ದಾನಿಗಳ ವಿವರವನ್ನು ನೀಡಿದರು. ಸುನಿಲ್ ಪಣಪಿಲ ಕಾರ್ಯಕ್ರಮ ನಿರೂಪಿಸಿದರು.

0 Comments