ಶಾಸಕಿ ಭಾಗೀರಥಿ ಮುರುಳ್ಯಗೆ ಅವಹೇಳನ: ಪ್ರತಿಭಟನೆಯ ಎಚ್ಚರಿಕೆ ನೀಡಿದ ಬಿಜೆಪಿ ನಾಯಕ ಆಶ್ರಿತ್ ನೋಂಡಾ
ಸಾಮಾಜಿಕ ಜಾಲತಾಣದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರ ಬಗ್ಗೆ ಅವಹೇಳನಕಾರಿಯಾಗಿ ಬರಹಗಳನ್ನು ಹಾಕಿ ಶ್ರದ್ಧಾಂಜಲಿ ಪೋಸ್ಟರ್ ಹಾಕಿದ ಬಿಲ್ಲವ ಸಂದೇಶ ಎನ್ನುವ ಫೇಸ್ಬುಕ್‌ದಾರನ ವಿರುದ್ಧ ಬಿಜೆಪಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಆಶ್ರಿತ್ ನೋಂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ಆಗ್ರಹಿಸಿದ ನೋಂಡ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
"ನಮ್ಮ ಪಕ್ಷವು ಹಳ್ಳಿಯಿಂದ ದಿಲ್ಲಿಯತನಕ ಶೋಷಣೆಗೊಳಗಾದ ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ ಕೆಲವು ವಿಘ್ನ ಸಂತೋಷಿಗಳಿಗೆ ಅದನ್ನು ಸಹಿಸಲಾಗುತ್ತಿಲ್ಲ. ಮೊದಲ ಬಾರಿಗೆ ಶಾಸಕರಾದರೂ ಕೂಡಾ ಯಾವುದೇ ಅನುಭವದ ಕೊರತೆ ಇಲ್ಲದಂತೆ ಸ್ವಚ್ಛ ರಾಜಕಾರಣ ಮಾಡುತ್ತಿರುವ ಹೆಮ್ಮೆಯ ಮಹಿಳೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು."
"ಆದರೆ ಇಂದು ಕೆಲವರ ಅಸೂಯೆ ಕಟ್ಟೆ ಒಡೆದಂತೆ ಕಾಣುತ್ತಿದೆ. ಶಾಸಕರ ಜಾತಿಯನ್ನು ಹಿಡಿದು ನಿಂದಿಸಿದ್ದು ಮಾತ್ರವಲ್ಲದೆ ಅವರಿಗೆ ಶ್ರದ್ಧಾಂಜಲಿ ಕೋರುವ ಪೋಸ್ಟ್‌ನ್ನು ಬಿಲ್ಲವ ಸಂದೇಶ್ ಎನ್ನುವ ಫೇಸ್‌ಬುಕ್ ಅಕೌಂಟ್ ಹೋಲ್ಡರ್ ಹಾಕಿದ್ದಾನೆ. ತನ್ನ ಅಕೌಂಟ್ ಪ್ರೊಫೈಲ್ ಲಾಕ್ ಮಾಡಿ ಪೋಸ್ಟ್ ಮಾಡಿರುವ ಈತನ ಹಿನ್ನೆಲೆ ನಮಗೆ ಗೊತ್ತಿಲ್ಲ. ಆದರೆ ಶಾಸಕರನ್ನು ಅವಹೇಳನ ಮಾಡಿದ್ದು ಮಾತ್ರವಲ್ಲದೆ ಅವರನ್ನು ಅತೀವವಾಗಿ ಗೌರವಿಸುವ ಬಿಲ್ಲವ ಸಮಾಜದ ನಡುವೆ ಬಿರುಕು ಮೂಡಿಸುವ ಷಡ್ಯಂತ್ರ ಮಾಡಿದ್ದಾನೆ. ಪೊಲೀಸ್ ಅಧಿಕಾರಿಗಳು ಈ ಕೂಡಲೇ ಈತನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಶ್ರಿತ್ ನೋಂಡಾ ಆಗ್ರಹಿಸಿದ್ದಾರೆ.
"ಇದು ಕೇವಲ ಶಾಸಕರಿಗೆ ಅಥವಾ ಅವರ ಜನಾಂಗಕ್ಕೆ ಆಗಿರುವ ಅವಮಾನ ಇಲ್ಲ. ಇದನ್ನು ನಾವೆಲ್ಲರೂ ಸ್ವೀಕರಿಸಿದ್ದೇವೆ. ಇಡಿಯ ಹಿಂದೂ ಸಮಾಜ ಶಾಸಕರ ಜೊತೆಗಿದೆ. ದುಷ್ಕರ್ಮಿಯ ಬಂಧನ ಆಗದಿದ್ದರೆ ಹಿಂದೂ ಸಮಾಜ ಬೀದಿಗಿಳಿಯುವುದು ಖಚಿತ" ಎಂದು ಎಚ್ಚರಿಕೆ ನೀಡಿದ್ದಾರೆ.



0 Comments