ಮೂಡುಬಿದಿರೆ: ವೀರರಾಣಿ ಅಬ್ಬಕ್ಕ ಅವರ 500ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ, 'ಜವನೆರ್ ಬೆದ್ರ' ವತಿಯಿಂದ ನೀಡಲಾಗುವ ಪ್ರತಿಷ್ಠಿತ "ಅಬ್ಬಕ್ಕ ಪ್ರೇರಣಾ ಗೌರವ" ಪುರಸ್ಕಾರಕ್ಕೆ ಮೂಡುಬಿದಿರೆ ಧವಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಅವರು ಆಯ್ಕೆಯಾಗಿದ್ದಾರೆ.
ಮಲ್ಲಿಕಾ ರಾವ್ ಅವರು ಕಳೆದ 10 ವರ್ಷಗಳಿಂದ ಧವಲಾ ಕಾಲೇಜಿನ ಲಲಿತ ಕಲಾ ಸಂಘದ ಸಂಯೋಜಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಕನ್ನಡ ಭಾಷೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಹಲವಾರು ವಿಚಾರ ಸಂಕಿರಣ, ಧವಲಾಸಿರಿ ಕಾರ್ಯಕ್ರಮ ಆಯೋಜನೆಯಲ್ಲೋ ಶ್ರಮಿಸಿದ್ದಾರೆ. ರಾಜ್ಯ ಮಟ್ಟದ ಸಾಂಸ್ಕೃತಿಕ ಕಾಯಕ್ರಮಗಳಲ್ಲಿ ತೀರ್ಪುಗಾರರಾಗಿ, ವಿವಿಧ ವಿದ್ಯಾಸಂಸ್ಥೆ, ಸಂಘ ಸಂಸ್ಥೆ ಗಳಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿರುತ್ತಾರೆ. ಇವರ ಸಾಂಸ್ಕೃತಿಕ ಕಳಕಳಿಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಅಲ್ಲದೆ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ಅವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ, ಇತ್ತೀಚೆಗೆ ಉಂಬೆಟ್ಟುನಲ್ಲಿ ನಡೆದ ಎನ್.ಎಸ್.ಎಸ್ ವಾರ್ಷಿಕ ಶಿಬಿರದಲ್ಲಿ ಅಲ್ಲಿನ ಎಸ್‌ಡಿಎಂಸಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ನಿರೂಪಣೆ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಅವರ ನಿರಂತರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗಿದೆ.


0 Comments