ನಿಡ್ಡೋಡಿಯ ಜ್ಞಾನರತ್ನ ಸಂಸ್ಥೆಯಿಂದ "ಗ್ರಾಮೋತ್ಸವ-17"
*ಮಕ್ಕಳ ವೇದಿಕೆಗೆ ಗ್ರಾಮೋತ್ಸವ ಪೂರಕ: ಅರವಿಂದ ಬೋಳಾರ್"
ಮೂಡುಬಿದಿರೆ: ಶಿಕ್ಷಣದ ಜೊತೆಗೆ ವೃತ್ತಿ ಜೀವನಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಗ್ರಾಮೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಲನಚಿತ್ರದ ಖ್ಯಾತ ಹಾಸ್ಯನಟ ಅರವಿಂದ ಬೋಳಾರ್ ಅಭಿಪ್ರಾಯಪಟ್ಟರು.
ಅವರು ಜ್ಞಾನರತ್ನ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ 'ಶನಿವಾರ ಸಂಜೆ ನಿಡ್ಡೋಡಿಯ ರತ್ನಗಿರಿಯಲ್ಲಿ ವೈಭವದಿಂದ ನಡೆದ "ಗ್ರಾಮೋತ್ಸವ-17'ನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, "ಇತಿಹಾಸ ಮತ್ತು ಪರಂಪರೆಯನ್ನು ಅರಿಯದವರು ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ. ಶಿಕ್ಷಣದೊಂದಿಗೆ ರಾಷ್ಟ್ರಧರ್ಮ ಮತ್ತು ಗ್ರಾಮೀಣ ಸೊಗಡನ್ನು ಪಸರಿಸುತ್ತಿರುವ ಭಾಸ್ಕರ ದೇವಸ್ಯ ಅವರ ಕಾರ್ಯ ಶ್ಲಾಘನೀಯ," ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, "ಲಾಭಕ್ಕಿಂತ ಸೇವೆಯೇ ಮುಖ್ಯ ಎಂಬ ಧ್ಯೇಯದೊಂದಿಗೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ದೇವಸ್ಯ ದಂಪತಿಯ ಕಾರ್ಯ ಮಾದರಿಯಾಗಿದೆ," ಎಂದು ಹಾರೈಸಿದರು.
ಸನ್ಮಾನ: ಮಾಜಿ ಸೈನಿಕ ಉದಯಚಂದ್ರ ಉಡುಪ, ಪ್ರಗತಿಪರ ಕೃಷಿಕ ರಾಘು ಸಾಲ್ಯಾನ್ ಮತ್ತು ಅಂಗನವಾಡಿ ಕಾರ್ಯಕರ್ತೆ ಸುಮತಿ ಅವರನ್ನುಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಉಚಿತ ಹಾಗೂ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಾ ಬಂದಿದೆ ಎಂದರು.
ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಸಂಗೀತಾ ಭಾಸ್ಕರ ದೇವಸ್ಯ, ಪ್ರಾಂಶುಪಾಲೆ ಅನುರಾಧ ಸಾಲ್ಯಾನ್, ಮುಖ್ಯ ಶಿಕ್ಷಕಿ ಯಶ್ವಿತಾ, ಆಡಳಿತಾಧಿಕಾರಿ ಸಾಗರ್, ಶಾಲಾ ನಾಯಕಿ ಶ್ರಾವ್ಯ ಉಪಸ್ಥಿತರಿದ್ದರು.
ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ವೈಭವ:
ಶ್ರೀ ದುರ್ಗಾದೇವಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಲ್ಕಿ ಚಂದ್ರಶೇಖರ ಸುವರ್ಣ ಅವರ ನಿರ್ದೇಶನದಲ್ಲಿ 'ಸತ್ಯದ ತುಡರ್' ಪ್ರದರ್ಶನ ಹಾಗೂ ರಕ್ಷಿತ್ ಶೆಟ್ಟಿ ಪಡ್ರೆ ಅವರ ನಿರ್ದೇಶನದಲ್ಲಿ 'ಕಾರುಣ್ಯಾಂಬುಧಿ ಶ್ರೀರಾಮ' ಯಕ್ಷಗಾನ ಪ್ರದರ್ಶನಗೊಂಡಿತು.




0 Comments