ಸಹಕಾರ ಸಪ್ತಾಹ ಸಂಭ್ರಮಕ್ಕೆ ಚಾಲನೆ
*ಎಂ. ಜಾರ್ಜ್ ಮೋನಿಸ್ ಅವರಿಗೆ `ಸಹಕಾರ ಕಲ್ಪವೃಕ್ಷ ಪ್ರಶಸ್ತಿ' ಪ್ರದಾನ
ಮೂಡುಬಿದಿರೆ : ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಲಿಮಿಟೆಡ್ ವತಿಯಿಂದ ನಡೆಯಲಿರುವ `ಸಹಕಾರ ಸಪ್ತಾಹ ಸಂಭ್ರಮ' ಕಾರ್ಯಕ್ರಮವನ್ನು ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಶುಕ್ರವಾರ ಉದ್ಘಾಟಿಸಿ ಸಹಕಾರಿ ನೂತನ ಯೋಜನೆ ಋಣ ಪರಿಹಾರ ನಿಧಿ ಯೋಜನೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ದೇಶದಲ್ಲಿರುವ 451 ಡಿಸಿಸಿ ಬ್ಯಾಂಕ್‌ಗಳಲ್ಲಿ ದ.ಕ. ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳು ಮಾದರಿಯಾಗಿವೆ. ಜಿಲ್ಲೆಯ ಜನರ ಉತ್ತಮ ಸಾಲ ಮರುಪಾವತಿ ಹಾಗೂ ಠೇವಣಿ ಸಂಸ್ಕೃತಿಯೇ ಇದಕ್ಕೆ ಕಾರಣ ಎಂದು ನಬಾರ್ಡ್ ಅಧಿಕಾರಿಗಳು ಪ್ರಶಂಸಿಸಿರುವುದನ್ನು ಉಲ್ಲೇಖಿಸಿದರು
ಇಂದು ಸಹಕಾರಿ ಕ್ಷೇತ್ರ ಬೆಳೆದಿದೆ. ಅದಕ್ಕೆ ಅನುಗುಣವಾಗಿ ಎಸ್‌ಸಿಎಸ್ ತನ್ನ ಸದಸ್ಯರಿಗೆ ವಿವಿಧ ಯೋಜನೆಗಳನ್ನು ರೂಪಿಸಿ, ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿರುವುದು ಸಹಕಾರ ಕ್ಷೇತ್ರದಲ್ಲಿ ಮಾದರಿ ಎಂದರು.
ಮೈಸೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ರೆ.ಫಾ ಪ್ರಾನ್ಸಿಸ್ ಸೆರಾವೊ ಆಶೀವರ್ಚನ ನೀಡಿದರು.
ಕಲ್ಪವೃಕ್ಷ ಪ್ರಶಸ್ತಿ ಪ್ರದಾನ : ಸೊಸೈಟಿಯ ಹಿರಿಯ ನಿರ್ದೇಶಕ ಎಂ. ಜಾರ್ಜ್ ಮೋನಿಸ್ ಅವರಿಗೆ `ಸಹಕಾರ ಕಲ್ಪವೃಕ್ಷ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದರು. ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್ ನ ಧರ್ಮಗುರು ರೆ.ಫಾ ಒನಿಲ್ ಡಿಸೋಜ, ಮಾಜಿ ಸಚಿವ ಎಂಸಿಎಸ್ ಬ್ಯಾಂಕ್ ನಿರ್ದೇಶಕ ಕೆ.ಅಭಯಚಂದ್ರ ಜೈನ್, ಶಿರ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ, ಡಾ. ಎಚ್.ಎನ್ ರಮೇಶ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಲ್ಯೊಟ್ಟು ಉಪಸ್ಥಿತರಿದ್ದರು.
ಸಹಕಾರಿ ಶಿಕ್ಷಣ ನಿಧಿಗೆ ರೂ.11 ಲಕ್ಷ, ಶಿರ್ತಾಡಿ ಕೃಷಿ ಪತ್ತಿನ ಸಂಘಕ್ಕೆ ಒಂದು ಲಕ್ಷ ರೂ. ದೇಣಿಗೆ ಹಾಗೂ ಕಲ್ಪವೃಕ್ಷ ಆರೋಗ್ಯ ಕಾರ್ಡ್ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.
ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಪ್ರಸ್ತಾವನೆಗೈದರು. ನಿರ್ದೇಶಕ ಸಿ.ಎಚ್ ಗಫೂರ್ ಶುಭಾಂಸನೆಗೈದರು. ಚೇತಾನ ರಾಜೇಂದ್ರ ಹೆಗ್ಡೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವಾಸ್ ಧೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾರ್ಥಿ ಕಲಾವಿದರಿಂದ ಸಿಂಧೂರ ಸಂಗ್ರಾಮ ಯಕ್ಷಗಾನ ಪ್ರಸ್ತುತಿ, ಶ್ರೀಶಾ ಪ್ರಭು ಮೂಡುಬಿದಿರೆ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.




0 Comments