ಮೂಡುಬಿದಿರೆ ಪುರಸಭೆ ಆಡಳಿತ ಅವಧಿ ವಿಸ್ತರಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಲು ಬಿಜೆಪಿ ಸಿದ್ಧತೆ
ಮೂಡುಬಿದಿರೆ: ಇಲ್ಲಿನ ಪುರಸಭೆಯ ಆಡಳಿತ ಅವಧಿಯನ್ನು ವಿಸ್ತರಿಸುವಂತೆ ಕೋರಿ ಬಿಜೆಪಿ ಸದಸ್ಯರು ಹೈಕೋರ್ಟ್ ಮೆಟ್ಟಲೇರಲು ಸಿದ್ಧತೆ ನಡೆಸಿದ್ದಾರೆ.
2024 ಆಗಸ್ಟ್ ತಿಂಗಳಲ್ಲಿ ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಜಯಶ್ರೀ ಕೇಶವ ಅಧ್ಯಕ್ಷರಾಗಿ ಹಾಗೂ ನಾಗರಾಜ ಪೂಜಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅ. 15ರಂದು ಪುರಸಭೆಯ ಮಾಸಿಕ ಸಭೆ ನಡೆದಿದ್ದು ಇದು ಈಗಿನ ಆಡಳಿತದ ಕಡೇ ಮಾಸಿಕ ಸಭೆ ಎನ್ನಲಾಗಿದ್ದು
ನ. 7ಕ್ಕೆ ಐದು ವಷ೯ದ ಅವಧಿ ಪೂಣ೯ಗೊಳ್ಳಲಿದೆ.
ಎರಡುವರೆ ವರ್ಷದ ಅಧಿಕಾರವಧಿಯಲ್ಲಿ ಇದುವರೆಗೆ ಇವರಿಗೆ ಸಿಕ್ಕಿದ ಆಡಳಿತದ ಅವಧಿ ಒಂದು ವರ್ಷ ಒಂದು ತಿಂಗಳು ಮಾತ್ರ ಎನ್ನಲಾಗಿದೆ. ಮೊದಲ ಅವಧಿಯ ಅಧ್ಯಕ್ಷರಾಗಿದ್ದ ಪ್ರಸಾದ್ ಕುಮಾರ್ ಅವರ ಆಡಳಿತ ಅವಧಿ ಮುಗಿದ ನಂತರ ಸರಕಾರ ಸುಮಾರು ಒಂದೂವರೆ ವರ್ಷ ಚುನಾವಣೆ ನಡೆಸದೆ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ನಮಗೆ ಎರಡೂವರೆ ವರ್ಷ ಅವಧಿ ಪೂರ್ಣಗೊಳ್ಳುವವರೆಗೆ ಅಧಿಕಾರವಧಿಯನ್ನು ವಿಸ್ತರಿಸಬೇಕೆಂದು ಕೋರಿ ಇಲ್ಲಿನ ಪುರಸಭೆ ಬಿಜೆಪಿ ಸದಸ್ಯರ ಪರವಾಗಿ ಅಧ್ಯಕ್ಷೆ ಜಯಶ್ರೀ ಕೇಶವ ಮತ್ತು ಉಪಾಧ್ಯಕ್ಷ ನಾಗರಾಜ ಪೂಜಾರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.



0 Comments