ವಿದ್ಯಾಥಿ೯ಗಳು ಮನರಂಜನೆಯ ನೆಪದಲ್ಲಿ ಡ್ರಗ್ಸ್ ವ್ಯಸನಕ್ಕೆ ಬಲಿಯಾಗದಿರಿ : ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸಲಹೆ
ಮೂಡುಬಿದಿರೆ : ವಿದ್ಯಾರ್ಥಿಗಳು ಮನರಂಜನೆ ಅಥವಾ ಸ್ನೇಹಿತರ ಪ್ರಭಾವದಿಂದಲೂ ಡ್ರಗ್ಸ್ ವ್ಯಸನದ ಬಲೆಗೆ ಬೀಳಬಹುದು ಈ ಬಗ್ಗೆ ಜಾಗೃತೆ ವಹಿಸಿ. ಬಹುಪಾಲು ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ಕಿರುಕುಳವು ಪರಿಚಿತರ ಅಥವಾ ಕುಟುಂಬದವರಿಂದಲೇ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಧೈಯ೯ದಿಂದ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಗತ್ಯ ಎಂದು ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ ಸಲಹೆ ನೀಡಿದರು.
ಅವರು ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆದ ‘ಸೈಬರ್ ಕ್ರೈಮ್, ಡ್ರಗ್ ಟ್ರಾಫಿಕಿಂಗ್ ಹಾಗೂ ಸೋಶಿಯಲ್ ಆ್ಯಂಡ್ ಲೀಗಲ್ ಇಂಪ್ಲಿಕೇಶನ್ಸ್’ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.
ಮಾದಕ ವಸ್ತುಗಳ ಮೂಲಕ ಯುವ ಜನರನ್ನು ತಪ್ಪು ದಾರಿಗೆ ಎಳೆಯುವ ಹಾಗೂ ಕೋಮು ಸೌಹಾರ್ದತೆಯನ್ನು ಕೆಡಿಸುವ ಕೆಲಸವಾಗುತ್ತಿದೆ ಎಂದರು.
,
“ಸೈಬರ್ ಅಪರಾಧಗಳು ಇಂದು ಅತ್ಯಂತ ಸಂಕೀರ್ಣ ಹಾಗೂ ಕಾನೂನು ಜಾರಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿವೆ. ವಂಚಕರು ಈಗ ಅಸಲಿಯಂತೆ ಕಾಣುವ, ನಕಲಿ ಹೂಡಿಕೆ ವೆಬ್‌ಸೈಟ್ ಲಿಂಕ್‌ಗಳನ್ನು ಸೃಷ್ಟಿಸುತ್ತಿದ್ದಾರೆ. ಜನರು ಅವುಗಳ ಮೇಲೆ ಕ್ಲಿಕ್ ಮಾಡಿದಾಗ ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಆಗಿ, ಜನರು ಅದನ್ನು ನಿಜವೆಂದು ನಂಬಿ ನಿರಂತರವಾಗಿ ಹಣ ಹೂಡುತ್ತಾರೆ. ಈ ಹಣ ವಂಚಕರ ‘ಮ್ಯೂಲ್ ಅಕೌಂಟ್’ (ಬೇರೊಬ್ಬರ ಹೆಸರಿನಲ್ಲಿ ತೆರೆಯಲಾದ ಆದರೆ ಸೈಬರ್ ವಂಚಕರಿಂದ ನಿಯಂತ್ರಿಸಲ್ಪಡುವ ಬ್ಯಾಂಕ್ ಖಾತೆ) ಗಳಿಗೆ ವರ್ಗಾಯಿಸಲಾಗುತ್ತದೆ. ಈ ಖಾತೆಗಳು ಹಲವು ರಾಜ್ಯಗಳಲ್ಲಿ ಹರಡಿರುವುದರಿಂದ ಹಣದ ವರ್ಗಾವಣೆಯನ್ನು ಪತ್ತೆಹಚ್ಚುವುದು ಕಷ್ಟವಾಗುತ್ತದೆ. ನಂತರ ಈ ಹಣವನ್ನು ನಗದಾಗಿ ಬದಲಾಯಿಸಿ ಬಿಟ್‌ಕಾಯಿನ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಾರೆ ಎಂದು ತಿಳಿಸಿದರು.
ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ಸೈಬರ್ ಅಪರಾಧಗಳ ವಿರುದ್ಧ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ದೇಶದೊಳಗೆ ಕಾರ್ಯನಿರ್ವಹಿಸುವ ವಂಚಕರನ್ನು ಬಂಧಿಸಿ, ಹಣವನ್ನು ವಾಪಸು ಪಡೆಯಲು ಪ್ರಯತ್ನಿಸಲಾಗುತ್ತದೆ. ಈ ನೆಲೆಯಲ್ಲಿ ಗ್ರಾಹಕರಿಗೆ ‘1930’ ಸೈಬರ್ ಕ್ರೈಮ್ ಹೆಲ್ಪ್ಲೈನ್ ನಂಬರ್ ಸಹಕಾರಿಯಾಗಿದೆ. ವಂಚನೆಗೊಳಗಾದವರು ಶೀಘ್ರವಾಗಿ ಈ ಹೆಲ್ಪ್ಲೈನ್‌ಗೆ ಮಾಹಿತಿ ನೀಡಿದರೆ, ಖಾತೆಗಳನ್ನು ಸ್ಥಗಿತಗೊಳಿಸಿ ಮತ್ತು ಹಣ ವಾಪಸು ಪಡೆಯಲು ಸಾಧ್ಯ ಎಂದರು.
ಅಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ, ಅಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಮಹಾಂತೇಶ್ ಜಿ.ಎಸ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ನಿಶಾಂತ್ ಅತಿಥಿಯನ್ನು ಪರಿಚಯಿಸಿದರು. ಸಾಧನಾ ಜಿ.ಎಸ್ ಕಾಯ೯ಕ್ರಮ ನಿರೂಪಿಸಿದರು. ನಿಷಿ ವಂದಿಸಿದರು.
0 Comments