ಆಲಂಗಾರು ಅಯ್ಯ ಜಗದ್ಗುರು ಮಠದಲ್ಲಿ ವಿಶ್ವಕರ್ಮ ಯಜ್ಞ, ಮುಷ್ಠಿ ಕಾಣಿಕೆ ಸಮರ್ಪಣೆ
ಮೂಡುಬಿದಿರೆ : ಶ್ರೀಶ್ರೀಶ್ರೀ ಜಗದ್ಗುರು ಅಯ್ಯ ಸ್ವಾಮೀ ಮಠವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಮಠದಲ್ಲಿ ಶ್ರೀಗುರು, ವಿಶ್ವಕರ್ಮ ಯಜ್ಞ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆಯು ಭಾನುವಾರ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಾತನಾಡಿ ಶ್ರೀ ಮಠದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಲ ಕೂಡಿ ಬಂದಿದ್ದು ಈ ಯೋಜನೆ ಸಾಕಾರಗೊಳ್ಳಲು ಭಗವಂತ ಶಕ್ತಿಯನ್ನು ನೀಡಲಿ, ಎಲ್ಲಾ ಮಠ ಮಂದಿರಗಳು ಸಹಕಾರ ನೀಡಲಿ ಎಂದರು.
ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ವಿಶ್ವಕರ್ಮರು ಮೂಲದಿಂದಲೇ ಸಹನಶೀಲ ಗುಣವುಳ್ಳವರು. ಎಲ್ಲಾ ಮತಧರ್ಮೀಯರ ಧಾರ್ಮಿಕ ಕೇಂದ್ರಗಳ ನಿರ್ಮಾಣ ಮಾತ್ರವಲ್ಲದೇ ಜನಸಾಮಾನ್ಯರ ಜೀವನಾವಶ್ಯಕತೆಯ ಪರಿಕರಗಳನ್ನು ಒದಗಿಸಿದ ಈ ಸಮುದಾಯವು ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಅಯ್ಯ ಜಗದ್ಗುರು ಮಠವು ಅಗೋಚರ ಶಕ್ತಿಯನ್ನು ಹೊಂದಿದ್ದು ಗುರುಗಳ ಅನುಗ್ರಹದಿಂದ ಕ್ಷೇತ್ರ ಅಭಿವೃದ್ಧಿ ಹೊಂದಲಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಈ ಕ್ಷೇತ್ರವು ಪವಿತ್ರ ಕ್ಷೇತ್ರವಾಗಿದ್ದು ಜೀರ್ಣೋದ್ಧಾರ ಕಾರ್ಯ ಶೀಘ್ರ ಕೈಗೂಡಲಿ. ಸರಕಾರದಿಂದ ಆರ್ಥಿಕ ನೆರವು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ ವಿಶ್ವಕರ್ಮ ಸಮುದಾಯವು ಸಣ್ಣ ಸಮುದಾಯವಾದರೂ ಹೃದಯ ಶ್ರೀಮಂತಿಕೆಯನ್ನು ಹೊಂದಿದೆ. ಶ್ರಮಜೀವಿಗಳಾದ ವಿಶ್ವಕರ್ಮರು ಎಲ್ಲಾ ಧರ್ಮೀಯರ ಶ್ರದ್ಧಾಕೇಂದ್ರಗಳ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಅಲಂಗಾರು ಚರ್ಚಿನ ಧರ್ಮಗುರು ವಂ| ಗುರು ಮೆಲ್ವಿನ್ ನೊರೊನ್ಹಾ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಚೌಟರ ಅರಮನೆಯ ಕುಲದೀಪ ಎಂ., ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಹಾಸನದ ಉದ್ಯಮಿ ಮಧುಕುಮಾರ್ ವೈ, ವಾಸ್ತುಶಿಲ್ಪಿ ಉಮೇಶ್ ಆಚಾರ್ಯ, ಗೌರವಾಧ್ಯಕ್ಷ ಧನಂಜಯ ಪಾಲ್ಕೆ, ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ, ಮಠದ ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್, ಉದ್ಯಮಿ ಕೆ. ಶ್ರೀಪತಿ ಭಟ್ ಮಾತನಾಡಿದರು.
ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ ಲಿ. ನ ನಿರ್ದೇಶಕ ಪ್ರಜ್ವಲ್ ಆಚಾರ್ಯ, ಪುರಸಭಾ ಸದಸ್ಯ ಪಿ.ಕೆ. ಥೋಮಸ್, ಮೂಡಾದ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎನ್. ಕೇಶವ ತಂತ್ರಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಪುರಂದರ ಪುರೋಹಿತ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಹರೀಶ್ ಪುರೋಹಿತ್ ವಂದಿಸಿದರು. ಎನ್. ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ಅರ್ಕುಳ ಸುಬ್ರಯ ಆಚಾರ್ಯ ಸಂಸ್ಮರಣೆ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ನಡೆಯಿತು.
ಚಿತ್ರ : ೫ಎಮ್‌ಡಿಬಿಆಲಂಗಾರು
0 Comments