' ಕಾನೂನು ಉಲ್ಲಂಘಿಸಿ ಕಟ್ಟಡ ನಿಮಿ೯ಸಿದವನಿಂದಲೇ ಪುರಸಭೆಯ ಮೇಲೆ ಸವಾರಿ: ಕ್ರಮಕೈಗೊಳ್ಳಲು ಉಪಾಧ್ಯಕ್ಷರಿಂದ ಸೂಚನೆ
ಮೂಡುಬಿದಿರೆ : ಪುರಸಭೆಯ ಕಾನೂನು ಉಲ್ಲಂಘಿಸಿ ಸ್ವರಾಜ್ಯ ಮೈದಾನದ ಬಳಿ ಸೆಟ್ ಬ್ಯಾಕ್ ಬಿಡದೆ ಅಕ್ರಮವಾಗಿ ಕಟ್ಟಡವನ್ನು ಕಟ್ಟಿರುವ ವ್ಯಕ್ತಿಯೋವ೯ ತ್ಯಾಜ್ಯ ನಿವ೯ಹಣೆಯ ವಿಚಾರದಲ್ಲಿ ಪುರಸಭೆಯ ಬಗ್ಗೆ ಕೆಟ್ಟದಾಗಿ ಮಾತನಾಡಿ ವಿಡಿಯೋವನ್ನು ವೈರಲ್ ಮಾಡಿರುವುದು ಪುರಸಭೆಗೆ ನಾಚಿಗೆ ನಾವು ಸುಮ್ಮನೆ ಇದ್ದಿದರಿಂದ ಹೀಗೆ ಮಾಡಿದ್ದಾನೆ ಆದ್ದರಿಂದ ಆತ ಅತಿಕ್ರಮಣ ಮಾಡಿರುವ ಜಾಗವನ್ನು ತೆರವುಗೊಳಿಸಬೇಕು ಮತ್ತು ಯಾರೂ ಕಟ್ಟಡಕ್ಕೆ ಪರವಾನಿಗೆ ನೀಡಿದ್ದಾರೋ ಆ ಅಧಿಕಾರಿಯ ಮೇಲೆ ಪುರಸಭೆ ಕ್ರಮ ಕೈಗೊಳ್ಳಬೇಕೆಂದು ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಅವರು ಮುಖ್ಯಾಧಿಕಾರಿ ಇಂದು ಎಂ.ಅವರಿಗೆ ಸೂಚಿಸಿದ್ದಾರೆ.
ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪುರಸಭೆಯ ಐದು ವರ್ಷಗಳ ಅವಧಿಯ ಕೊನೆಯ ಮಾಸಿಕ ಸಭೆಯಲ್ಲಿ ಕಸ,ತ್ಯಾಜ್ಯ, ಮಾರ್ಕೆಟ್ ಕಟ್ಟಡ,ದಾರಿದೀಪದ ಬಗ್ಗೆ ನಡೆದ ಚಚೆ೯ಯಲ್ಲಿ ಉಪಾಧ್ಯಕ್ಷರು ಮಾತನಾಡಿದರು.
ಸದಸ್ಯ ಕೊರಗಪ್ಪ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮೂಡುಬಿದಿರೆ ಪೇಟೆಯಲ್ಲಿ ಕಸದ ರಾಶಿ ಅಲ್ಲಲ್ಲಿ ಕಂಡು ಬರುತ್ತಿವೆ. ಸಿಸಿ ಕೆಮರಾ ಮತ್ತು ಪುರಸಭೆಯು ಸೂಚನಾ ಫಲಕಗಳನ್ನು ಹಾಕಿರುವ ಬುಡದಲ್ಲಿಯೇ ಕಸ ತುಂಬಿಸಿಟ್ಟಿರುವ ಚೀಲಗಳು ಕಂಡು ಬರುತ್ತಿವೆ. ಅಲ್ಲದೆ ಮಾಂಸದ ಮಾಕೆ೯ಟ್ ಬಳಿ ಯಾರೋ ತ್ಯಾಜ್ಯವನ್ನು ತುಂಬಿಸಿಟ್ಟು ಇದು ವಾಸನೆ ಬೀರುತ್ತಿತ್ತು ಇದನ್ನು ಅಲ್ಲೆ ಪಕ್ಕದ ಕಟ್ಟಡದಲ್ಲಿರುವ ವ್ಯಕ್ತಿ ವಿಡಿಯೋ ಮಾಡಿ ಮಾಡಿದ್ದು ಇದು ನಾವೆಲ್ಲರೂ ತಲೆ ತಗ್ಗಿಸುವಂತ್ತಾಗಿದೆ. ನಮ್ಮ ಪರಿಸರ ಎಂಜಿನಿಯರ್ ಮತ್ತು ಆರೋಗ್ಯ ನಿರೀಕ್ಷಕರ ನಿಲ೯ಕ್ಷ್ಯದಿಂದಾಗಿ ಇದು ಆಗಿದೆ ಎಂದು ಆರೋಪಿಸಿದರು.
ಮೂಡುಬಿದಿರೆ ಅಭಿವೃದ್ಧಿ ಹೊಂದುತ್ತಿರುವಂತೆಯೇ ತ್ಯಾಜ್ಯದ ರಾಶಿಯೂ ಅಲ್ಲಲ್ಲಿ ಕಾಣ ಸಿಗುತ್ತಿದೆ ಪರಿಸರ ಅಭಿಯಂತರರು ಆಫೀಸಿನಲ್ಲಿ ಎಸಿಯ ಕೆಳಗೆ ಕುಳಿತುಕೊಳ್ಳುವುದು ಬೇಡ ಹೊರಗಡೆ ಬಂದು ಪರಿಶೀಲನೆ ನಡೆಸಿ ಎಂದು ಸದಸ್ಯ ಸುರೇಶ್ ಪ್ರಭು ಹೇಳಿದರು ಇದಕ್ಕೆ ಹೆಚ್ಚಿನ ಸದಸ್ಯರು ಹೌದೆನ್ನುವಂತೆ ತಲೆಯಾಡಿಸಿದರು.
ದೇಶದಲ್ಲೇ ಎಲ್ಲಾ ವಿಷಯದಲ್ಲೂ ಬುದ್ಧಿವಂತ ಜನರಿರುವುದು ದ. ಕ ಜಿಲ್ಲೆಯಲ್ಲಿ ಎಂದು ಎಲ್ಲರೂ ಹೇಳುತ್ತಾರೆ. ಮೊದಲೆಲ್ಲಾ ಮದ್ಯ ಸೇವಿಸಲು, ಮಜಾ ಮಾಡಲು ಜನರು ಗೋವಾಕ್ಕೆ ಹೋಗುತ್ತಿದ್ದರು. ಆದರೆ ನಾವು ಇಂದು ಕಸ ನಿವ೯ಹಣೆಯ ಬಗ್ಗೆ ತಿಳಿದುಕೊಳ್ಳಲು ಗೋವಾಕ್ಕೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಪ್ರಭುಗಳು ನಗೆ ಚಟಾಕಿ ಹಾರಿಸಿದರು.
ಸದಸ್ಯರಾದ ಸುರೇಶ್ ಕೋಟ್ಯಾನ್, ದಿವ್ಯಾ ಜಗದೀಶ್, ಸುಜಾತ ಹಾಗೂ ತನ್ನ ವಾಡಿ೯ಗಳಲ್ಲಿ ಬೋರ್ ಗಳನ್ನು ಕೊರೆಯಲಾಗಿದೆ ಆದರೆ ಮೆಸ್ಕಾಂ ನ ಕನೆಕ್ಷನ್ ಆಗದಿರುವುದರಿಂದ ನೀರು ಬರುತ್ತಿಲ್ಲ ಇದರಿಂದಾಗಿ ಕುಡಿಯಲು ನೀರಿಲ್ಲದಂತ್ತಾಗಿದೆ., ಮಾಸ್ತಿಕಟ್ಟೆಯಲ್ಲಿರುವ ಅಂಬೇಡ್ಕರ್ ಭವನದ ಬೀಗವನ್ನು ಒಡೆದು ಯಾರೋ ಒಳ ಹೋಗುತ್ತಿದ್ದಾರೆ. ಅಲ್ಲಿ ಸ್ವಚ್ಛತೆಯಿಲ್ಲ ಮತ್ತು ಮೇಲ್ಛಾವಣಿಯೂ ಸರಿಯಿಲ್ಲ ಆದ್ದರಿಂದ ಅದನ್ನು ಸರಿಪಡಿಸಿ 'ನಮ್ಮ ಕ್ಲಿನಿಕ್' ಗೆ ಅವಕಾಶ ನೀಡಬಹುದು ಎಂದು ಸದಸ್ಯ ಪ್ರಸಾದ್ ಸಭೆಯ ಗಮನಕ್ಕೆ ತಂದರು.
ಸದಸ್ಯ ರಾಜೇಶ್ ನಾಯ್ಕ್ ಅವರು ' ಮಚ್ಲಿ ಹೊಟೇಲ್ ನ ಗಲೀಜು ನೀರು ಪಕ್ಕದಲ್ಲಿರುವ ಮನೆಗಳ ಬಾವಿಗಳಿಗೆ ಸೇರುತ್ತಿರುವುದರಿಂದ ಜನರ ಕುಡಿವ ನೀರಿಗೆ ಸಮಸ್ಯೆಯಾಗಿದೆ, ಅಲ್ಲಿಗೆ ಪರಿಶೀಲಿಸಲೆಂದು ನಾವು ಹೋದಾಗ ಕಾಂತಾರ ಸಿನೆಮಾದ ಡೈಲಾಗ್ ನಂತೆ ನಿಮ್ಮನ್ನು ಗುಳಿಗೆ ನೋಡಲಿ,ಮಂತ್ರದೇವತೆ ನೋಡಲಿ ಎಂದು ಶಾಪ ಹಾಕುತ್ತಾರೆ' ಆದ್ದರಿಂದ ಪುರಸಭೆಯು ಇದರ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.
ಮನೆಗಳಿಗೆ ಪರವಾನಿಗೆ ನೀಡಲು ಪುರಸಭೆಯು ಮೊದಲು ಕೆ-3 ಖಾತೆಯನ್ನು ಬಳಸುತ್ತಿತ್ತು ಆದರೆ ಇದೀಗ ಅದು ಕ್ಯಾನ್ಸಲ್ ಆಗುವ ಸೂಚನೆಯಿದೆ ಎಂದು ಸದಸ್ಯ ಸುರೇಶ್ ಕೋಟ್ಯಾನ್ ಸಭೆಯ ಗಮನಕ್ಕೆ ತಂದರು. ನಾವು ಹಿಂದೆ ನೀಡುತ್ತಿದ್ದ ಬಿ ಖಾತೆಯನ್ನು ಸರಕಾರವು ಎ ಖಾತೆಗೆ ಬದಲಾವಣೆಗೊಳಿಸಿ ಮನೆಗಳಿಗೆ ಪರವಾನಿಗೆ ನೀಡಲು ಅವಕಾಶ ಮಾಡಿಕೊಡಬೇಕೆಂದು ಎಲ್ಲಾ ಸದಸ್ಯರು ಸವಾ೯ನುಮತದಿಂದ ಸರಕಾರಕ್ಕೆ ಮನವಿ ಮಾಡೋಣ ಎಂದು ಉಪಾಧ್ಯಕ್ಷ ನಾಗರಾಜ ಪೂಜಾರಿ ತಿಳಿಸಿದರು ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಪ್ರಾಂತ್ಯ ಶಾಲೆಯ ಹಿಂಬದಿಯ ಖಾಸಗಿ ಕಟ್ಟವೊಂದು ರಸ್ತೆಯನ್ನು ಅತಿಕ್ರಮಿಸಿದ್ದರಿಂದ ಮಳೆಯ ನೀರು ರಸ್ತೆಗೆ ಹರಿಯುತ್ತಿದೆ ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಈ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಇಕ್ಬಾಲ್ ಕರೀಂ ತಿಳಿಸಿದರು.
ಕುಮ್ಕಿ ಜಾಗದಲ್ಲಿ ಉದ್ಯಾವನ ಮಾಡಲು ಅನುಮತಿ ನೀಡಬೇಕೆಂದು ಪುರಸಭೆಗೆ ಬಂದಿರುವ ಮನವಿಯ ಬಗ್ಗೆ ಆಡಳಿತ ಪಕ್ಷದ ಸದಸ್ಯೆ ಸುಜಾತ ಶಶಿಕಿರಣ್ ಅವರು ಆಕ್ಷೇಪ ವ್ಯಕ್ತ ಪಡಿಸಿ ಅಲ್ಲಿ ಹಿಂದೆ ಕ್ರೀಡಾಂಗಣ ಮಾಡಲೆಂದು ಮನವಿ ಬಂದಿತ್ತು ಆದರೆ ತಹಶೀಲ್ದಾರ್ ಅವರು ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದೀಗ ಮತ್ತೆ ಅದೇ ಜಾಗದಲ್ಲಿ ಉದ್ಯಾನವನ ಮಾಡಲು ಯಾರು ಮನವಿ ನೀಡಿದ್ದು, ಒಂದು ಸಲ ರಿಜೆಕ್ಟ್ ಆಗಿರುವ ಜಾಗದ ಬಗ್ಗೆ ಮತ್ಯಾಕೆ ಮುತುವಜಿ೯ ತೋರಿಸುತ್ತಿದ್ದೀರಿ ಆ ಜಾಗದಲ್ಲಿ ಯಾವುದಕ್ಕೂ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು.
ಪ್ರೀತಿ ಎಂಬುವವರು ಕೆಲವು ಜನರ ಸಹಿಯೊಂದಿಗೆ ಆ ಜಾಗದಲ್ಲಿ ಉದ್ಯಾನವನಕ್ಕೆ ಅವಕಾಶ ನೀಡಬಾರದೆಂದು ಪುರಸಭೆಗೆ ಮನವಿಯನ್ನು ಕೂಡಾ ನೀಡಿದ್ದಾರೆಂದರು.
ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್ ಅವರ ಮನೆಯೂ ಅಲ್ಲೇ ಪಕ್ಕದಲ್ಲಿದ್ದು ಮಕ್ಕಳಿಗೆ ಆಟವಾಡಲು ಮತ್ತು ಸ್ಥಳೀಯರಿಗೆ ಸಂಜೆ ವೇಳೆಗೆ ರಿಲ್ಯಾಕ್ಸ್ ಆಗಲೆಂಬ ಉದ್ದೇಶದಿಂದ ಸ್ಥಳೀಯರ ಸಹಿಯನ್ನು ಒಳಗೊಂಡ ಉದ್ಯಾನವನ ಬೇಕೆಂಬ ಮನವಿಯನ್ನು ಸ್ವೀಕರಿಸಿದ್ದರು ಆದರೆ ಇಬ್ಬರ ವೈಯಕ್ತಿಯ ಮುನಿಸಿನಿಂದಾಗಿ ಪರ ವಿರೋಧಗಳು ವ್ಯಕ್ತವಾಯಿತು.
ಪುರಸಭೆಯ ವ್ಯಾಪ್ತಿಯ ಲ್ಲಿರುವ ಕುಮ್ಕಿ ಜಾಗಗಳನ್ನು ನಿವೇಶನ ಇಲ್ಲದಿರುವವರಿಗೆ ಕಾಯ್ದಿರಿಸುವ ಬಗ್ಗೆ ಚಚೆ೯ ನಡೆಯಿತು.
ಇದಲ್ಲದೆ ಕೆಲವು ಗಂಭೀರ ಚರ್ಚೆಗಳು ಪರ- ವಿರೋಧ ಆರೋಪಗಳು ಈ ಕೊನೆಯ ಮಾಸಿಕ ಸಭೆಯಲ್ಲಿ ನಡೆಯಿತು.
ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು,ಹಿರಿಯ ಸದಸ್ಯ ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ಪುರಂದರ ದೇವಾಡಿಗ ,ಮಮತಾ ಆನಂದ್,ಜೊಸ್ಸಿ ಮಿನೇಜಸ್,ಪ್ರಸಾದ್ ಕುಮಾರ್, ಶ್ವೇತಾ,ಶಕುಂತಲಾ ದೇವಾಡಿಗ, ಸೌಮ್ಯ ಶೆಟ್ಟಿ, ದಿವ್ಯ ಜಗದೀಶ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯಾಧಿಕಾರಿ ಇಂದು ಎಂ, ಇಂಜಿನಿಯರ್ ನಳಿನ್ ಕುಮಾರ್ ಸಹಿತ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
-----------------
ಕಳೆದ ಕೆಲ ವರ್ಷಗಳಿಂದ ಹೈಕೋರ್ಟ್ ತಡೆಯಾಜ್ಞೆಯಿಂದ ಬ್ರೇಕ್ ಬಿದ್ದಿದ್ದ ಮೂಡುಬಿದಿರೆ ಪುರಸಭಾ ಮಾರ್ಕೆಟ್ ಕಟ್ಟಡದ ಕೆಲಸ ಮತ್ತೆ ಪ್ರಾರಂಭಗೊಂಡಿದೆ.
ಮಾರ್ಕೆಟ್ ನ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕೆಲಸ ಪ್ರಾರಂಭಗೊಂಡು ಮುಕ್ಕಾಲು ಅಂಶ ಆಗುತ್ತಿರುವಾಗಲೇ ಪುರಾತತ್ವ ಇಲಾಖೆಯ ಅನುಮತಿ ಪಡೆಯಲಿಲ್ಲ ಎನ್ನುವ ಕಾರಣದಿಂದ ಕಾಮಗಾರಿ ಮುಂದುವರಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ಬಳಿಕ ಹಲವು ಬಾರಿ ಈ ಕುರಿತಾದ ವಿಚಾರಣೆ ನಡೆದು ಕೊನೆಗೂ ಪುರಾತತ್ವ ಇಲಾಖೆ ಅನುಮತಿ ನೀಡಿದ ಬಳಿಕ ಮತ್ತೆ ಕಾಮಗಾರಿ ಮುಂದುವರಿಸುವಂತೆ ಗ್ರೀನ್ ಸಿಗ್ನಲ್ ನೀಡಿದೆ.
ಕಟ್ಟಡದ ಕಾಮಗಾರಿ ಶೀಘ್ರ ಮುಕ್ತಾಯಗೊಳ್ಳುವ ನಿರೀಕ್ಷೆಯಿದ್ದು ಈ ಹಿಂದಿನ ಸ್ಕೆಚ್ ಪ್ರಕಾರವೇ ನಡೆಯಲಿದೆ ಎಂದು ತಿಳಿದು ಬಂದಿದೆ.
---------------------
0 Comments