ದ್ವಿಚಕ್ರ ವಾಹನ ಪರವಾನಿಗೆಯಲ್ಲಿ ಆಟೋ ರಿಕ್ಷಾ ಚಾಲನೆ ಮಾಡಬೇಡಿ
*ತೆಂಕಮಿಜಾರು ಗ್ರಾಮ ಸಭೆಯಲ್ಲಿ ಪೊಲೀಸರಿಂದ ಸಲಹೆ
ಮೂಡುಬಿದಿರೆ : ದ್ವಿಚಕ್ರ ವಾಹನದ ಪರವಾನಿಗೆಯನ್ನು ಬಳಸಿ ಆಟೋರಿಕ್ಷಾವನ್ನು ಓಡಿಸಬೇಡಿ. ಲಕ್ಷ ಲಕ್ಷ ಕೊಟ್ಟು ವಾಹನ ಖರೀದಿಸುವ ನೀವು ವಷ೯ಕ್ಕೆ ಎರಡು ಸಾವಿರ ರೂ ಕೊಟ್ಟು ಪರವಾನಿಗೆ ಮಾಡಿಸಿಕೊಳ್ಳಿ ಮನೆಯಲ್ಲಿ ನಿಮಗಾಗಿ ಕಾಯುವ ಕುಟುಂಬವಿದೆ ಎಂಬುದನ್ನು ಮರೆಯದಿರಿ ಎಂದು ಮೂಡುಬಿದಿರೆ ಠಾಣೆಯ ಪಿಎಸ್ ಐ ನವೀನ್ ಅವರು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಅವರು ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನೀರ್ಕೆರೆ ಸಂತೆಕಟ್ಟೆಯ ವಿವಿಧೋದ್ದೇಶ ಸಭಾಂಗಣದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಯಾವುದೇ ಕಾರಣಕ್ಕೂ ವಾಹನ ಪರವಾನಿಗೆ ಮಾಡದೆ ಇರಬೇಡಿ ಮತ್ತು ನಿಮಗಾಗಿ ಇರುವ ಯೂನಿಫಾರಂನ್ನು ಸೀಟಿನ ಮೇಲೆ ಹಾಕಿ ಕೂರಬೇಡಿ ಅಥವಾ ಬೆನ್ನ ಹಿಂದೆ ನೇತು ಹಾಕಬೇಡಿ ಅದಕ್ಕೆ ಅದರದ್ದೇ ಆದ ಮಯಾ೯ದೆ ಇದೆ ಎಂಬುದನ್ನು ಮರೆಯದಿರಿ ಎಂದು ಸಲಹೆ ನೀಡಿದರು.
ತೆಂಕಮಿಜಾರು, ಪುತ್ತಿಗೆ, ಬೆಳುವಾಯಿ, ಪಡುಮಾರ್ನಾಡು ಗ್ರಾಮಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಹಂತದಲ್ಲಿರುವ ರಸ್ತೆಗಳಲ್ಲೇ ಅತೀ ವೇಗ, ಅಜಾಗರೂಕತೆಯಿಂದ ಇಲ್ಲಿ ಕಾರ್ಯ ನಿರ್ವಹಿಸುವ ವಾಹನಗಳು ಓಡಾಡುತ್ತಿದ್ದು, ಅವಘಡಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ಕುರಿತು ಗ್ರಾಮಸ್ಥರು ಗಮನಸೆಳೆದರು.
ಗುತ್ತಿಗೆದಾರರ ವಾಹನಗಳು ಅತಿವೇಗದೊಂದಿಗೆ ಇತರ ವಾಹನಗಳನ್ನು ಓವರ್ ಟೇಕ್ ಮಾಡುವುದೂ ಅಪಾಯಕಾರಿಯಾಗಿದೆ. ಬೆಳಗ್ಗೆ ಮತ್ತು ಸಂಜೆ ಶಾಲೆ ಕಾಲೇಜುಗಳ ವಾಹನಗಳೂ ಖಾಸಗಿ ಬಸ್ಸುಗಳೂ ಈ ರಾ.ಹೆ. ಗುತ್ತಿಗೆದಾರರ ವಾಹನಗಳು ಅಪಾಯವನ್ನು ಎದುರಿಸುತ್ತಿವೆ ಎಂದು ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಸಹಿತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ನಂಬರ್ ಪ್ಲೇಟ್ ಇಲ್ಲದೆ ಲಾರಿಗಳು ಸಂಚರಿಸುತ್ತಿದ್ದು, ಅವಘಡಗಳು ಸಂಭವಿಸಿದಾಗ ಅವುಗಳನ್ನು ಗುರುತಿಸುವುದು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ರಾ.ಹೆ. ಪ್ರಾಧಿಕಾರದ ಸಲಹೆಗಾರ ಸಾತ್ವಿಕ್ ಮಾತನಾಡಿ, ನಿಯಮ ಪಾಲಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇವೆ ಎಂದು ತಿಳಿಸಿದರು.
ಕೇವಲ ಒಂದು ಮನೆ ಇರುವಲ್ಲಿಗೆ ಕಾಂಕ್ರೀಟ್ ರಸ್ತೆಯನ್ನು ಮಾಡಿರುವ ಬಗ್ಗೆ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಆಕ್ಷೇಪ ವ್ಯಕ್ತಪಡಿಸಿ ಬಿಲ್ಲ್ ಪಾವತಿಯಾಗಿದ್ದರೆ ಅದನ್ನು ತಡೆ ಹಿಡಿಯಿರಿ ಎಂದರು.
ಆ ರಸ್ತೆಯು ಶಾಸಕರ ಶಿಫಾರಸ್ಸಿನ ಮೇರೆಗೆ ಮಾಡಲಾಗಿದೆ ಎಂದು ಪಿಡಿಓ ತಿಳಿಸಿದಾಗ ಅಲ್ಲಿ ಒಂದೇ ಮನೆ ಇರುದೆಂದು ಶಾಸಕರ ಗಮನಕ್ಕೆ ಬಂದಿರಲು ಸಾಧ್ಯವಿಲ್ಲ ಇದು ಸದಸ್ಯರಿಂದನೇ ಆಗಿರಬಹುದು ಎಂದು ಬಾಲಕೃಷ್ಣ ಅವರು ಹೇಳಿದರು.
ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರಕ್ಕೆ ಕರಿಕುಮೇರಿನಲ್ಲಿ ಜಾಗ ಆಗಿದೆ ಎಂದು ಪ್ರತೀ ಗ್ರಾಮಸಭೆಯಲ್ಲಿ ಪ್ರಕಟಿಸಿ ಮತ್ತೆ ಅದನ್ನು ಫಾಲೋ ಅಪ್ ಮಾಡುತ್ತಿಲ್ಲ ಏಕೆ ಎಂದು ಶಶಿಕಾಂತ ಶೆಟ್ಟಿಗಾರ್ ಅವರು ಕೇಳಿದಾಗ ಪಿಡಿಓ ರೋಹಿಣಿ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ರಾ.ಹೆ. ಪಕ್ಕದ ಹಳೆ ರಸ್ತೆಯ ನಿರ್ವಹಣೆ ಯಾರದ್ದು ಎಂದು ಬಿ.ಎಲ್. ದಿನೇಶ್ ಕುಮಾರ್ ಕೇಳಿದಾಗ ರಾ.ಹೆ. ಕೆಲಸಪೂರ್ಣವಾಗಿ ಎರಡು ವರ್ಷಗಳ ಬಳಿಕ ಅದನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಲಾಗುವುದು ಎಂದರು ಸಾತ್ವಿಕ್ ತಿಳಿಸಿದರು.
ತೋಟಗಾರಿಕೆ ಇಲಾಖೆಯ ಅಧಿಕಾರಿ ಮಹೇಶ್ ನೋಡಲ್ ಅಧಿಕಾರಿಯಾಗಿದ್ದರು,
ವಿವಿಧ ಫಲಾನುಭವಿಗಳಿಗೆ ಅಧ್ಯಕ್ಷೆ ಶಾಲಿನಿ, ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಚೆಕ್ ವಿತರಿಸಿದರು. ದ್ವಿ.ದ. ಸಹಾಯಕ ರಮೇಶ ಬಂಗೇರ ನಿರ್ಣಯಗಳನ್ನು ದಾಖಲಿಸಿದರು. ಸಿಬಂದಿ ರಾಕೇಶ್ ಭಟ್ ನಿರೂಪಿಸಿ ವಂದಿಸಿದರು.
0 Comments