ಸಂಸದ ಕೋಟ ಶ್ರೀನಿವಾಸ ಪೂಜಾರಿ ನಡೆಗೆ ಮಹಾರಾಷ್ಟ್ರದಲ್ಲಿ ಭಾರೀ ವಿರೋಧ:ಕರ್ನಾಟಕ ಕರಾವಳಿಯಲ್ಲಿ ಹೆಚ್ಚಿದ ಬೆಂಬಲ
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಈಗಾಗಲೇ ನಷ್ಟದಲ್ಲಿರುವ ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುಂಬೈಗೆ ವಿಸ್ತರಿಸಬೇಕೆಂಬ ಸತತ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಗೋವಾದ ಮಡಗಾಂವ್ ವರೆಗೆ ತೆರಳಿ ವಾಪಸು ಬರುತ್ತಿರುವ ಈ ರೈಲು ಪ್ರಯಾಣಿಕರ ಕೊರತೆಯನ್ನು ನೀಗಿಸಲು ಮುಂಬೈಗೆ ವಿಸ್ತರಿಸಬೇಕೆಂಬುದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಯತ್ನ.
ಈಗಾಗಲೇ ಸಂಸದ ಕೋಟ ಕೇಂದ್ರ ಸಚಿವರನ್ನು ಮತ್ತು ರೈಲು ಮಂಡಳಿಯ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಪ್ರಯತ್ನ ಯಶಸ್ವಿಯಾಗುವ ಸಂದರ್ಭದಲ್ಲೇ ಮಹಾರಾಷ್ಟ್ರದಲ್ಲಿ ಈ ನಡೆಗೆ ವಿರೋಧ ವ್ಯಕ್ತವಾಗಿದೆ. ಮಂಗಳೂರು, ಉಡುಪಿ ಕಡೆಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಸಂಖ್ಯೆಯ ಅತಿ ಹೆಚ್ಚು ಇರುವುದರಿಂದ ಗೋವಾ-ಮುಂಬೈ ನಡುವಿನ ಪ್ರಯಾಣಿಕರಿಗೆ ಟಿಕೆಟ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಈ ರೈಲನ್ನು ಮುಂಬೈಗೆ ವಿಸ್ತರಣೆ ಮಾಡಬಾರದು ಎಂಬುದು ಅಲ್ಲಿನ ಹೋರಾಟಗಾರರ ಆಗ್ರಹವಾಗಿದೆ.
ಆದರೆ ಯಾವುದೇ ಕಾರಣಕ್ಕೂ ಈ ನಡೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಮತ್ತು ಆದ್ಯತೆಯ ಮೇರೆಗೆ ಮುಂದಿನ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲನ್ನು ಹಾಕುವ ಉದ್ದೇಶವನ್ನೂ ಹೊಂದಿದ್ದು ಈ ಬಗ್ಗೆ ಸಂಸದರ ಮನವಿಗೆ ಸಚಿವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಸಂಸದರ ಈ ಪ್ರಯತ್ನಕ್ಕೆ ಕರ್ನಾಟಕ ಕರಾವಳಿ ಭಾಗದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವಾರು ರೈಲು ಅಭಿವೃದ್ಧಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸದರು ಈ ಪ್ರಯತ್ನದಲ್ಲಿ ಯಶಸ್ವಿಯಾದರೆ ಬಹುದೊಡ್ಡ ಯಶಸ್ಸು ದೊರಕಲಿದೆ ಎಂಬುದು ಜನತೆಯ ಅಭಿಪ್ರಾಯ. ಮಾತ್ರವಲ್ಲದೆ ಸಂಸದರ ಈ ನಡೆಗೆ ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯೂ ಹರ್ಷ ವ್ಯಕ್ತಪಡಿಸಿದೆ.
0 Comments