ನೀರ್ಕೆರೆ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಯಮುನಾ ಅವರಿಗೆ ಸಮ್ಮಾನ
ಮೂಡುಬಿದಿರೆ : ದ.ಕ. ಜಿ.ಪಂ.ಸ.ಹಿ. ಪ್ರಾಥಮಿಕ ಶಾಲೆ ನೀರ್ಕೆರೆ, ಪ್ರತಿಭಾ ಪುರಸ್ಕಾರ ಸಮಿತಿ, ಹಳೆವಿದ್ಯಾರ್ಥಿಗಳ ಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ `ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ' ಹೆಸರಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ಮುಖ್ಯಶಿಕ್ಷಕಿ ಯಮುನಾ ಕೆ. ಅವರ ಅಭಿನಂದನ, ಸಾಧಕರಿಗೆ ಸಮ್ಮಾನ, ಗುರುವಂದನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವು ಶನಿವಾರ ಶಾಲಾ ವೇದಿಕೆಯಲ್ಲಿ ನಡೆಯಿತು.
ವೈದಿಕ ಗುರುರಾಜ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯೆ ಸಾಥ೯ಕತೆಯ ಗುರಿಯನ್ನು ಹೊಂದಿರಬೇಕು. ಮನೆ ಮತ್ತು ಶಾಲೆಯ ವಾತಾವರಣ ಪೂರಕವಾಗಿದ್ದರೆ ಮಕ್ಕಳು ಸಮಾಜಕ್ಕೆ ಮತ್ತು ಊರಿಗೆ ಉತ್ತಮ ಹೆಸರು ತರಲು ಸಾಧ್ಯವಾಗುತ್ತದೆ ಎಂದರು.
ಮುಖ್ಯಅತಿಥಿ, ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ತಾನು ಜಿ.ಪಂ. ಸದಸ್ಯ, ಅಧ್ಯಕ್ಷನಾಗಿದ್ದ ಕಾಲದಿಂದಲೂ ಶಾಲೆಯ ಪ್ರಗತಿಯನ್ನು ಗಮನಿಸಿದ್ದೇನೆ,ಯಥಾಶಕ್ತಿ ಸಹಕಾರ ನೀಡಿದ್ದೇನೆ ಎಂದರು.
ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಭಾಗವಹಿಸಿ ಮಾತನಾಡಿ ಮನೆ ಯಲ್ಲಿ ತಂದೆ ತಾಯಿ ನಮಗೆ ಜೀವ ನೀಡುವವರಾದರೆ ಶಿಕ್ಷಕರು ನಮಗೆ ಜೀವನ ಕೊಡುವವರು. ನೀಕೆ೯ರೆಯಂತಹ ಒಂದು ಸರಕಾರಿ ಶಾಲೆಯನ್ನು ಗುಣಮಟ್ಟದಲ್ಲಿ ಮತ್ತು ತನ್ಮೂಲಕ ಸಂಖ್ಯಾಶಕ್ತಿಯಲ್ಲಿಯೂ ಎದ್ದು ಕಾಣಿಸುವಂತೆ ಮಾಡಿ ತೋರಿಸಿದವರು ಇಲ್ಲಿನ ಶಿಕ್ಷಕರು ಮತ್ತು ಊರವರು ಎಂದರು.
ಪ್ರತಿಭಾ ಪುರಸ್ಕಾರ ಸಮಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಪ್ರ. ಕಾರ್ಯದರ್ಶಿ ಮಿಥುನ್ ರೈ ಅವರು ಸಮಾಜದ ಮುನ್ನಡೆಗೆ ಕಲಿಕೆ, ಕ್ರೀಡೆ, ಸಂಸ್ಕೃತಿ, ಕಲೆ , ಸಮಾಜಸೇವೆ ಎಲ್ಲವೂ ಬೇಕು; ಈ ಶಾಲೆಯಿಂದ ಸಮಾಜಕ್ಕೆ ಕೊಡುಗೆಯಾಗಬಲ್ಲವರು ಮೂಡಿಬರಲಿ ಎಂದು ಹಾರೈಸಿದರು.
ನೀರ್ಕೆರೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೊಡುಗೆ ನೀಡಿದ ಯಮುನಾ ಕೆ. ಅವರನ್ನು ಪತಿ, ಉದ್ಯಮಿ ಯೋಗೀಶ ಆಚಾರ್ಯ ಮೂಡುಬಿದಿರೆ ಅವರೊಂದಿಗೆ ನೀರ್ಕೆರೆಯ ಸಮಸ್ತ ನಾಗರಿಕರ ಪರವಾಗಿ `ಶಿಕ್ಷಕ ರತ್ನ ' ಬಿರುದು ನೀಡಿ ಸಾಂಪ್ರದಾಯಿಕವಾಗಿ ಸಮ್ಮಾನಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಜೋಗಿ ಅಭಿನಂದನ ಭಾಷಣ ಮಾಡಿದರು. ಶಾಲೆಯ ಶಿಕ್ಷಕ ವೃಂದದವರು ಸಮ್ಮಾನಿಸಿದರು. ಹ.ವಿ.ಸಂ. ಕಾರ್ಯದರ್ಶಿ ಜನಾರ್ದನ, ಸಹಶಿಕ್ಷಕಿ ಯೋಗಿತಾ ಸಮ್ಮಾನ ಪತ್ರಗಳನ್ನು ವಾಚಿಸಿದರು.
ಪ್ರಾ.ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಅಭಿವಂದಿಸುವ ಮೂಲಕ `ಗುರು ವಂದನೆ' ಸಲ್ಲಿಸಲಾಯಿತು. ನೀರ್ಕೆರೆಯಿಂದ ಪ್ರಾಂತ್ಯ ಶಾಲೆಗೆ ವರ್ಗಾವಣೆಗೊಂಡಿರುವ ಸಹನಾ ಷಣ್ಮುಖ ಮಡ್ಗಾಂವ್‌ಕರ್ ಇವನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು.
ಸಮ್ಮಾನ: ಶಾಲೆಯಲ್ಲಿ ಓದಿ ಆಯುರ್ವೇದ ವೈದ್ಯೆಯಾಗಿ, ಎಂಡಿ ಪದವಿ ಅಭ್ಯಾಸ ಮಾಡುತ್ತಿರುವ ಡಾ. ಮಮತಾ ಇವರನ್ನು ಗೌರವಿಸಲಾಯಿತು. ಶಾಲೆಗೆ ಪೂರಕ ಸಹಕಾರ, ಕೊಡುಗೆ ನೀಡುತ್ತ ಬರುತ್ತಿರುವ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಸಾಲಿಯಾನ್, ಭರತ್(ಡೆಸ್ಕ್), ರಾಜೇಶ್ (ಯೋಗ ತರಬೇತಿ), ರುಕ್ಮಯ (ವಿದ್ಯಾರ್ಥಿ ವೇತನ), ಚಂದ್ರಹಾಸ (ಛಾಯಾಚಿತ್ರ), ಯೋಗೀಶ ಶೆಟ್ಟಿಗಾರ್ (ಆಮಂತ್ರಣ ಪತ್ರ), ಚಂದ್ರಶೇಖರ ಶೆಟ್ಟಿಗಾರ್ (ಪೀಠೋಪಕರಣ ದುರಸ್ತಿ), ಹರೀಶ್ ಕೆ.(ಶಾಮಿಯಾನ), ಆಶಾ ಕಾರ್ಯಕರ್ತೆಯರಾದ ಸವಿತಾ, ಸುಜಾತಾ, ಜಯಶ್ರೀ ಇವರನ್ನು ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ಸಮಿತಿ ಗೌರವಾಧ್ಯಕ್ಷ ಅಜಿತ್‌ರಾಜ್ ಜೈನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರೋಹಿಣಿ, ವಿದ್ಯಾರ್ಥಿ ನಾಯಕ ಗಗನ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ದೊರೆಸ್ವಾಮಿ, ಶಿಕ್ಷಕರ ಸಂಘಟನೆಗಳ ಅಧ್ಯಕ್ಷರಾದ ಡಾ. ರಾಮಕೃಷ್ಣ ಶಿರೂರು, ನಾಗೇಶ್ ಎಸ್., ಸಿಆರ್‌ಪಿ ದಿನಕರ , ಎಸ್‌ಡಿಎಂಸಿ ಉಪಾಧ್ಯಕ್ಷ ಚಂದ್ರಹಾಸ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು, ಪೋಷಕರಿಗೆ ಬಹುಮಾನ ವಿತರಿಸಲಾಯಿತು.
ಯಮುನಾ ಕೆ. ಸ್ವಾಗತಿಸಿದರು. ದೈ.ಶಿ.ಶಿಕ್ಷಕಿ ಹೆಲೆನ್ ಡಿಸೋಜಾ ವಾರ್ಷಿಕ ವರದಿ ವಾಚಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿಗಾರ್ ವಂದಿಸಿದರು. ಶಿಕ್ಷಕ ಮೋಹನ ಕೊಳವಳ್ಳಿ ವಂದಿಸಿದರು.
0 Comments