ಮೂಡುಬಿದಿರೆ ಪೇಟೆಯಲ್ಲಿ ಕಸ ವಿಲೇವಾರಿ ಬಗ್ಗೆ ದೂರು:ಪೌರ ಕಾರ್ಮಿಕರ ಜೊತೆಗೆ ಫೀಲ್ಡಿಗಿಳಿದ ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ
ಶಿಕ್ಷಣ ಕಾಶಿ, ಜೈನ ಕಾಶಿ, ಸಾಂಸ್ಕೃತಿಕ ಕಾಶಿ ಎಂದೇ ಖ್ಯಾತಿ ಪಡೆದ ಮೂಡುಬಿದಿರೆ ಸ್ವಚ್ಚತೆಯ ವಿಚಾರದಲ್ಲೂ ಉತ್ತಮ ಹೆಸರನ್ನು ಪಡೆದ ನಗರವಾಗಿತ್ತು. ಅನೇಕ ಸಾಮಾಜಿಕ ಸಂಘಟನೆಗಳು ಕೂಡಾ ಸ್ವಚ್ಚತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಿದೆ. ಜವನೆರ್ ಬೆದ್ರ ಯುವ ಸಂಘಟನೆ, ನೇತಾಜಿ ಬ್ರಿಗೇಡ್, ರೋಟರಿ ಕ್ಲಬ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಹಿತ ಸಾಮಾಜಿಕ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿತ್ತು.
ಮೂಡುಬಿದಿರೆ ಪುರಸಭೆಯ ಅಧಿಕಾರಿಗಳು ಕಂಬಳ ಸಹಿತ ಇನ್ನಿತರ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಮುಕ್ತ ವ್ಯಾಪಾರ ವಹಿವಾಟುಗಳಿಗೆ ಪ್ರೋತ್ಸಾಹ ನೀಡಿ ಮಾದರಿ ಎನಿಸಿಕೊಂಡಿತ್ತು ಮತ್ತು ಭಾಗಶಃ ಯಶಸ್ಸು ಕಂಡಿತ್ತು. ಸ್ವಚ್ಚತೆಯ ವಿಚಾರದಲ್ಲಿ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಅಧಿಕಾರಿಗಳು ಸೇರಿದಂತೆ ಎಲ್ಲರೂ ನಗರದ ಸ್ವಚ್ಚತೆಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಪ್ರಸಾದ್ ಕುಮಾರ್ ರವರು ಕೂಡಾ ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡಿದ್ದರು.
ಆದರೆ 'ದೇವರು ಕೊಟ್ಟರೂ ಅರ್ಚಕ ಬಿಡಲಿಲ್ಲ' ಎಂಬಂತೆ ಮೂಡುಬಿದಿರೆ ನಗರದ ಅಂಗಡಿಯವರು ಹಾಗೂ ನಗರ ವಾಸಿಗಳು ಸ್ವಚ್ಚತೆಯ ಬಗ್ಗೆ ಆಲಸ್ಯ ವಹಿಸಿದ ಅನೇಕ ಘಟನೆಗಳು ನಡೆದಿದೆ. ಪುರಸಭೆಯ ಪ್ರತೀ ಸಭೆಯಲ್ಲೂ ಕಸ ವಿಲೇವಾರಿ ಸಮಸ್ಯೆಗಳ ಬಗ್ಗೆ ಚರ್ಚೆಗಳು ಸಾಮಾನ್ಯ ಎಂಬಂತಾಗಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದರ ಬಗ್ಗೆ ಮತ್ತು ಅಂಗಡಿ, ಮನೆಯವರು ಕಸ ವಿಂಗಡಿಸದೆ ಕೊಡದಿರುವ ಬಗ್ಗೆ ಚರ್ಚೆಗಳಾಗಿದ್ದರೂ ಪರಿಣಾಮಕಾರಿಯಾಗಿ ಸಮಸ್ಯೆ ಬಗೆಹರಿದಿಲ್ಲ. ಈ ನಿಟ್ಟಿನಲ್ಲಿ ಇದೀಗ ಸ್ವತಃ ಪುರಸಭಾ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿಯವರೇ ಖುದ್ದು ಕಾರ್ಯಾಚರಣೆಗೆ ಇಳಿದಿದ್ದಾರೆ. ಕಳೆದ 10ದಿನಗಳಿಂದ ನಗರ ಪ್ರದೇಶದಲ್ಲಿ ಪೌರಾಕಾರ್ಮಿಕರೊಂದಿಗೆ ಬೆಳ್ಳಂಬೆಳಗೆ ತೆರಳಿ ಕಸ ವಿಂಗಡಿಸದೆ ನೀಡುವ ಅಂಗಡಿ, ಹೋಟೆಲ್ ಗಳ ಮಾಹಿತಿ ಪಡೆದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಸುಮಾರು 7 ಗಂಟೆಗೆ ಪೌರ ಕಾರ್ಮಿಕರ ಜೊತೆಗೆ ನಿಂತು ಕೆಲಸ ಮಾಡಿಸುತ್ತಿದ್ದಾರೆ.
"ನಗರವನ್ನು ಸ್ವಚ್ಛವಾಗಿಡುವುದು ಕೇವಲ ಪುರಸಭೆಯ ಕೆಲಸ ಮಾತ್ರವಲ್ಲ, ಎಲ್ಲಾ ನಾಗರಿಕರು, ಅಂಗಡಿ, ಹೋಟೆಲ್ ಮಾಲೀಕರು ಕೂಡ ಸಹಕರಿಸಬೇಕು. ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಮಾಡುತ್ತಾರೆ. ಅವರಿಗೆ ಹಸಿ ಕಸ, ಒಣ ಕಸ ಹಾಗೂ ಗ್ಲಾಸ್ ಚೂರುಗಳನ್ನೆಲ್ಲಾ ಪ್ರತ್ಯೇಕ ಮಾಡಿಕೊಡುವ ಕೆಲಸ ಸಾರ್ವಜನಿಕರು ಮಾಡಬೇಕು" ಎಂದು ಪುರಸಭಾ ಅಧ್ಯಕ್ಷರಾದ ಜಯಶ್ರೀ ಕೇಶವ್ ರವರು ವಿನಂತಿಸಿದ್ದಾರೆ.
ಈ ಬಗ್ಗೆ ವೈಭವ ವಾಹಿನಿಗೆ ಮಾಹಿತಿ ನೀಡಿದ ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿಯವರು "ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಕಸಬಿಸಾಡುವವರಿಗೆ ದಂಡ ವಿಧಿಸುವ ಚರ್ಚೆ ನಡೆದಿದ್ದು ಸಿಸಿ ಕ್ಯಾಮರಾ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಅಂಗಡಿ ಮಾಲೀಕರು ಮತ್ತು ನಿವಾಸಿಗಳಿಗೆ ಈಗಾಗಲೇ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಸ ವಿಲೇವಾರಿ ಬಗ್ಗೆ ಅಸಡ್ಡೆ ತೋರಿಸಿದರೆ ದಂಡ ವಿಧಿಸಲಾಗುವುದು" ಎಂದು ತಿಳಿಸಿದರು.
0 Comments