ದೇವರ ಮಕ್ಕಳೊಂದಿಗೆ ಬೆರೆತ ನಳಿನ್ ಕುಮಾರ್ ಕಟೀಲು:ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ದಿನಾಂಕ ಘೋಷಣೆ
ಮಂಗಳೂರಿನ ವಿಟಿ ರಸ್ತೆಯ ಚೇತನ ಶಿಶು ಅಭಿವೃದ್ಧಿ ಕೇಂದ್ರದ ಮಕ್ಕಳ ಜೊತೆಗೆ ನಿಕಟ ಪೂರ್ವ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲುರವರು ಬೆರೆತ ಅಪರೂಪದ ಕ್ಷಣಕ್ಕೆ ಫುಡ್ ಫೆಸ್ಟಿವಲ್ ದಿನಾಂಕ ಘೋಷಣೆ ಕಾರ್ಯಕ್ರಮ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ನಳಿನ್ ಕುಮಾರ್ ಕಟೀಲು ವಿಶೇಷ ಚೇತನ ಮಕ್ಕಳ ಜೊತೆಗೆ ಒಂದಷ್ಟು ಕಾಲ ಕಳೆದು ಅವರ ಚಟುವಟಿಕೆಗಳ ಬಗ್ಗೆ ವಿಚಾರಿಸಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು 2025 ರ ಜನವರಿ 15 ರಿಂದ 19 ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು ಇದರ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ರವರು ವ್ಯಾಖ್ಯಾನಿಸಿದರು.
ನಗರದ ವಿ.ಟಿ ರಸ್ತೆಯ ಚೇತನ ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಕಳೆದೆರಡು ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು ಯಶಸ್ವಿಯಾಗಿ ಸಾಗಿದ್ದು ಲಕ್ಷಾಂತರ ಜನರನ್ನು ಆಕರ್ಷಿಸಿ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಿತ್ತು. ಅದರಂತೆ ಈ ಬಾರಿಯೂ ಹಿಂದಿನ ಆವೃತ್ತಿಗಳಂತೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಪಬ್ಬಾಸ್, ಮಣ್ಣಗುಡ್ಡ, ಕೆನರಾ ಹೈಸ್ಕೂಲ್ ಉರ್ವದ ಸುತ್ತಮುತ್ತ ಸಂಜೆ 4 ರಿಂದ ರಾತ್ರಿ 11ರ ವರೆಗೆ ಫುಡ್ ಫಿಯೆಸ್ಟಾ ಆಯೋಜಿಸಲಾಗಿದ್ದು, ಸಾರ್ವಜನಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ. ಬಹು ಬೇಡಿಕೆಯನುಸಾರ ಈ ಬಾರಿ ಸಸ್ಯಾಹಾರಿಗಳಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಮಾಡಲಾಗುವುದಾಗಿದ್ದು ಮಕ್ಕಳಿಗಾಗಿ ವಿಶೇಷ ವಿನೋದಾವಳಿಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿಷ್ಠಾನದ ಮಾರ್ಗದರ್ಶಕರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ಅತ್ಯಂತ ಯಶಸ್ವಿಯಾಗಿ ಸಮಾಪ್ತಿಗೊಂಡ ಕಳೆದೆರಡು ಬಾರಿಯ ಫುಡ್ ಫೆಸ್ಟ್ ನಿಂದ ಪ್ರೇರೇಪಣೆಗೊಂಡು ಸುರತ್ಕಲ್, ಮೂಡಬಿದ್ರಿ ಸೇರಿದಂತೆ ಅನೇಕ ಕಡೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆದಿವೆ. ಇದು ಎಲ್ಲೆಡೆ ಆಹಾರ ಸಂಸ್ಕೃತಿಯ ವಿನಿಮಯಕ್ಕೆ ದಾರಿಯಾಗಲಿದ್ದು ಈ ಬಾರಿಯ ಸ್ಟ್ರೀಟ್ ಫುಡ್ ಫಿಯೆಸ್ಟ ಈ ಹಿಂದಿಗಿಂತಲೂ ಹೆಚ್ಚಿನ ಜನರನ್ನು ಆಕರ್ಷಿಸಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ್, ನರೇಶ್ ಶೆಣೈ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
0 Comments