2024-25ನೇ ಸಾಲಿನ ಕಂಬಳ ಋತು ಆರಂಭ
ನ.9ರಂದು ಪಣಪಿಲ 'ಜಯ-ವಿಜಯ' ಜೋಡುಕರೆ ಕಂಬಳ
ಮೂಡುಬಿದಿರೆ : 'ಜಯ-ವಿಜಯ' ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯುವ 15ನೇ ವರ್ಷದ ಹೊನಲು ಬೆಳಕಿನ ಜೋಡುಕರೆ ಕಂಬಳವು ನ. 9ರಂದು ಶನಿವಾರ ನಡೆಯಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಚೌಟ ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಂಬಳದ ಜಿಲ್ಲಾ ತೀರ್ಪುಗಾರರ ಸಂಚಾಲಕ ವಿಜಯ್ ಕುಮಾರ್ ಜೈನ್ ಕಂಗಿನಮನೆ ಮಾತನಾಡಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಳೆದ 14 ವರ್ಷಗಳಿಂದ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದ ಕೋಣಗಳಿಗಾಗಿ ಕಂಬಳ ಕ್ರೀಡೆಯನ್ನು ಆಯೋಜಿಸುತ್ತಾ ಬರುತ್ತಿದೆ. ಇದೇ ಕಂಬಳದಲ್ಲಿ ಕೋಣಗಳನ್ನು ಓಡಿಸಿ ತರಬೇತಿಯನ್ನು ಹೊಂದಿದ ಪಣಪಿಲ ಪ್ರವೀಣ್ ಕೋಟ್ಯಾನ್ ಉತ್ತಮ ಓಟಗಾರರಾಗಿ ಗುರುತಿಸಿಕೊಂಡು ರಾಜ್ಯ ಸರಕಾರದಿಂದ ಕ್ರೀಡಾರತ್ನ ಪ್ರಶಸ್ತಿಯಲು ಸಹಕಾರಿಯಾಗಿದೆ. 133.5 ಮೀ ಉದ್ದದ ಕಂಬಳ ಕರೆಯಲ್ಲಿ ಓಟಕ್ಕೆ ಸಬ್ ಜೂನಿಯರ್, ಜೂನಿಯರ್ ಹಾಗೂ ಹಗ್ಗ ಕಿರಿಯ ಸೇರಿದಂತೆ ಸುಮಾರು 200 ಜತೆ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು 24ಗಂಟೆಯೊಳಗೆ ಕಂಬಳ ಸ್ಪರ್ಧೆಯನ್ನು ಮುಕ್ತಾಯಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ನ.9ರಂದು ಬೆಳಿಗ್ಗೆ 8 ಗಂಟೆಗೆ ಪಣಪಿಲ ಅರಮನೆಯ ವಿಮಲ್ ಕುಮಾರ್ ಶೆಟ್ಟಿ ಕಂಬಳವನ್ನು ಉದ್ಘಾಟಿಸಲಿದ್ದು ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸುವರು. ಸಮಿತಿ ಗೌರವ ಅಧ್ಯಕ್ಷ ಶಾಸಕ ಉಮಾನಾಥ ಕೋಟ್ಯಾನ್, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಮುಂತಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ರಾತ್ರಿ 8.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು, ಪ್ರಧಾನ ಕಾರ್ಯದರ್ಶಿ ಕೆ.ಅಶ್ವತ್ಥ ಪಣಪಿಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments