ಮೂಡುಬಿದಿರೆ: 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ
*ಚಂದ್ರಶೇಖರ ಎಂ.ಗೆ ' ಸಮಾಜ ಮಂದಿರ ಪುರಸ್ಕಾರ ಪ್ರದಾನ'
ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ವತಿಯಿಂದ 5 ದಿನಗಳ ಕಾಲ ನಡೆಯುವ ' 77ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಮಂಗಳೂರು ವಿವಿಯ ಕುಲಪತಿ ಡಾ. ಪಿ.ಎಲ್. ಧರ್ಮ ಅವರು ಬುಧವಾರ ಉದ್ಘಾಟಿಸಿ ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಬ್ಬಗಳು ದುರ್ಗಾದೇವಿಯ ಹತ್ತಿರದಲ್ಲಿರುವ ಒಂದು ಅಂಶ. ಸುಮಾರು ಶೇ 69ರಷ್ಟು ಹೆಣ್ಣು ಮಕ್ಕಳು ನಮ್ಮಲ್ಲಿದ್ದಾರೆ ಹಾಗಾಗಿ ದುರ್ಗಾಪೂಜೆಯು ಅತ್ಯಂತ ಹತ್ತಿರವಾಗಬೇಕಾಗಿದೆ.
ಪ್ರತಿಯೊಂದು ಹೆಣ್ಣಲ್ಲೂ ಪ್ರತಿಭಟನೆಯ ಸಂಗತಿ, ಸೂಚನೆಯನ್ನು ನವದುರ್ಗೆಯರು ತೋರಿಸಿಕೊಡಬೇಕು. ಹೆಣ್ಣು ಮಕ್ಕಳ ಮೇಲಿರುವ ಕ್ರೋಧ, ಅನಾಚಾರ ಇನ್ನೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅದನ್ನು ಮೀರಿ ನಡೆಯುವ ದುರ್ಗಾಪೂಜೆಗಳು ಹೆಚ್ಚಾಗಬೇಕು ಇದು ಕೇವಲ ಪೂಜೆಗೆ, ಪ್ರದರ್ಶನಕ್ಕೆ ಮೀಸಲಾಗಿರದೆ ಹೆಣ್ಣು ಮಕ್ಕಳ ರಕ್ಷಣೆಗಾಗಿ, ಅವರ ಹಕ್ಕುಗಳ ಸ್ಥಾಪನೆಗಾಗಿ, ಶಾಂತಿಯುತ ಬದುಕಿನ ಹಕ್ಕುಗಳ ಸ್ಥಾಪನೆಗಾಗಿ ಆಗಬೇಕೆಂಬುದೇ ಸಾಮಾನ್ಯನ ಆಶಯ ಎಂದರು.
ಪುರಸ್ಕಾರ: ಎಂ.ಸಿ.ಎಸ್. ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ, ಸಹಕಾರಿ ಸಾಧಕ ಚಂದ್ರಶೇಖರ ಎಂ. ಅವರಿಗೆ “ಸಮಾಜ ಮಂದಿರ ಪುರಸ್ಕಾರ 2024" ಪ್ರದಾನ ಮಾಡಲಾಯಿತು.
ಸಮಾಜ ಮಂದಿರ ಸಭಾದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್.ಡಿ.ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ಮಂದಿರ ಸಭಾದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳ ಪದಕಕ್ಕೆ ಪಡೆದಿರುವ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಅವರನ್ನು ಸಮಾಜ ಮಂದಿರದ ವತಿಯಿಂದ ಗೌರವಿಸಲಾಯಿತು.
ದಸರಾ ಉತ್ಸವದ ಸಂಚಾಲಕ ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ ಅಭಿನಂದನಾ ಭಾಷಣಗೈದರು. ಇನ್ನೋರ್ವ ಸಂಚಾಲಕ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಜಯರಾಯ ಕಂಬ್ಳಿ ವಂದಿಸಿದರು.
-------------
ನಮ್ಮ ದೇಶದಲ್ಲಿ ಅಘಾತಗಳು, ಸಮಸ್ಯೆಗಳು, ನಮ್ಮದೇ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ಹೆಣ್ಣುಮಕ್ಕಳನ್ನು ಇನ್ನಷ್ಟು ಕೀಳಾಗಿ ನೋಡುತ್ತಿರುವುದು ವಿಷಾಧನೀಯ. ದುರ್ಗಾ ಪೂಜೆಗೆ ಅರ್ಹರಾದ ನಾವು ಅಥವಾ ದುರ್ಗಾ ಒಂದು ಪೂಜೆಗೆ ಅರ್ಹಳು ಎಂದಾದರೆ ಪೂಜೆ ಮಾಡುವವರಿಗೂ ಆ ಸ್ಥಾನಮಾನ ಇರಲೇಬೇಕು. ಹೆಣ್ಣು ಮಗಳನ್ನು ಕ್ರೂರವಾಗಿ ನೋಡುವ ಒಬ್ಬ ಮಹಿಷಾಸುರ ನಮ್ಮೊಳಗೆ ಇದ್ದರೆ ಮಹಿಷಾಸುರನ ಮರ್ಧನ ದಸರಾದಲ್ಲಿ ಆಗಲೇಬೇಕು ಆಗ ಮಾತ್ರ ಹೆಣ್ಣು ಮಕ್ಕಳ ಮೇಲಾಗುವ ಅನಾಚಾರಗಳು, ಕ್ರೂರತೆ ಕಡಿಮೆಯಾಗಲು ಸಾಧ್ಯ : ಡಾ.ಪಿ.ಎಲ್.ಧರ್ಮ ( ಕುಲಪತಿಗಳು ಮಂಗಳೂರು ವಿವಿ)
0 Comments