ಮೂಡುಬಿದಿರೆ: ಎಸ್.ಎನ್.ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಂತ್ರಿಕ ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆ
ಮೂಡುಬಿದಿರೆ : ತಾಂತ್ರಿಕ ಶಿಕ್ಷಣ ಪಡೆದವರಿಗೆ ಶಕ್ತಿ ತುಂಬುವುದೇ ಸ್ಕಿಲ್ ಡೆವಲೆಪ್ ಮೆಂಟ್. ಭಾರತದಲ್ಲಿರುವ ಯುವ ಸಂಪತ್ತಿನಲ್ಲಿ ಪ್ರತಿಭೆ ಮತ್ತು ಅಪಾರವಾದ ಕೌಶಲ್ಯವಿದೆ ಆದರೆ ಅವರಿಗೆ ಸಿಗಬೇಕಾದ ಪ್ರೋತ್ಸಾಹದ ಕೊರತೆಯಿಂದಾಗಿ ಭಾರತ ಬಹಳ ಹಿಂದುಳಿದಿದೆ ಎಂದು ದ.ಕ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿ"ಸೋಜ ಹೇಳಿದರು.
ಅವರು ಇಲ್ಲಿನ ಎಸ್‌ಎನ್‌ಎಂ ಪಾಲಿಟೆಕ್ನಿಕ್‌ನ ಇನ್ನೊವೇಶನ್ ಸೆಲ್ ಇದರ ದಶಮಾನೋತ್ಸವದ ಅಂಗವಾಗಿ ಅಂತರ್ ಕಾಲೇಜು ತಾಂತ್ರಿಕ ಮಾದರಿಗಳ ಪ್ರದರ್ಶನ ಸ್ಪರ್ಧೆ "ನವತ್ವಂ ೨೦೨೪"ನ್ನು ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕ ಶಿಕ್ಷಣ ಪಡೆದವರು ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ ಮತ್ತು ಅವರಿಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದುಕೊಳ್ಳಲು ಸುಲಭವಾಗುವುದರ ಜತೆಗೆ ಕೈಗಾರಿಕೆಗಳಲ್ಲೂ ಬೇಡಿಕೆಯಿದೆ ಹಾಗಾಗಿ ಕಲಿಕೆಯ ಹಂತದಲ್ಲಿಯೇ ಅವರಲ್ಲಿ ಕೌಶಲ್ಯವನ್ನು ವೃದ್ಧಿಸುವ ಕೆಲಸವಾಗಬೇಕಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಕೌಶಲ್ಯಗಳ ಅಭಿವ್ಯಕ್ತಿಗೆ ಅವಕಾಶಗಳು ಸಿಗಬೇಕು. ವಿದ್ಯಾರ್ಥಿ ಹಂತದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದರೆ ಅವರನ್ನು ಜಗತ್ತಿನ ಶಕ್ತಿಯಾಗಿ ಬೆಳೆಸಬಹುದು. ಈ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಶಕ್ತಿ ತುಂಬುವ ಕೆಲಸವಾಗುತ್ತಿದೆ ಎಂದ ಅವರು ವಿದ್ಯಾರ್ಥಿಗಳು ಪರಿಶ್ರಮ ಪಡಿ, ಕೌಶಲ್ಯವನ್ನು ಬೆಳಸಿಕೊಳ್ಳಿ ಮತ್ತು ಸ್ವ ಉದ್ಯೋಗದತ್ತ ಬನ್ನಿ ಎಂದು ಕರೆ ನೀಡಿದರು.
ಪ್ರಾಂಶುಪಾಲ ಜೆ.ಜೆ.ಪಿಂಟೋ ಉಪಸ್ಥಿತರಿದ್ದರು.
ಇನ್ನೊವೇಶನ್ ಸೆಲ್‌ನ ಸಂಚಾಲಕ ಡಾ. ಎಸ್.ಪಿ ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಉಪನ್ಯಾಸಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮೆಕ್ಯಾನಿಕಲ್ ಹಾಗೂ ಆಟೊಮೊಬೈಲ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಕಮ್ಯುನಿಕೇಶನ್ ಹಾಗೂ ಮೆಕ್ಯಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ, ಸಿವಿಲ್ ಹಾಗೂ ಆರ್ಕಿಟೆಕ್ಚರ್ ಇಂಜಿನಿಯರಿಂಗ್ ವಿಭಾಗ, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್ ವಿಭಾಗ ಹೀಗೆ ಪ್ರಮುಖ ವಿಭಾಗಗಳಲ್ಲಿ ಅವಿಭಜಿತ ದ.ಕ ಜಿಲ್ಲೆಯ ವಿವಿಧ ಸಂಸ್ಥೆಗಳ 121 ತಾಂತ್ರಿಕ ಮಾದರಿಗಳು ಪ್ರದರ್ಶನಗೊಂಡವು.
0 Comments