ಹಾರೆ, ಪಿಕ್ಕಾಸು ಬಳಸಿ ಸುಂದರ ಗದ್ದೆ ನಿಮಿ೯ಸಿದ ಶಿರ್ತಾಡಿಯ ಗುತ್ತಿಗೆದಾರ

ಜಾಹೀರಾತು/Advertisment
ಜಾಹೀರಾತು/Advertisment
ಹಾರೆ, ಪಿಕ್ಕಾಸು ಬಳಸಿ ಸುಂದರ ಗದ್ದೆ ನಿಮಿ೯ಸಿದ ಶಿರ್ತಾಡಿಯ ಗುತ್ತಿಗೆದಾರ
 ಮೂಡುಬಿದಿರೆ : ಕೃಷಿ, ಗದ್ದೆಯ ಕೆಲಸದಿಂದ ದೂರ ಸರಿಯುತ್ತಿರುವ ಇಂದಿನ ಯುವಜನತೆಯ ಮಧ್ಯೆ ಗುತ್ತಿಗೆದಾರನೋವ೯ ಯಂತ್ರವನ್ನು ಕಾಯದೆ ಹಾರೆ ಪಿಕ್ಕಾಸಿನ ಮೂಲಕವೇ ಸುಂದರವಾದ ಗದ್ದೆಯನ್ನು ನಿರ್ಮಿಸಿ ಸಾಹಸ ಮೆರೆದಿದ್ದಾರೆ. 
ಗುತ್ತಿಗೆದಾರನಾಗಿ, ಸಾಮಾಜಿಕ ಸೇವಕನಾಗಿ ಸಾಕಷ್ಟು ಉತ್ತಮ ಕೆಲಸಗಳ ಮೂಲಕ ಗಮನಸೆಳೆದಿರುವ ಶಿತಾ೯ಡಿಯ ಜೆ.ಎನ್.ಎಸ್.ಕನ್ಸ್ಟ್ರಕ್ಷನ್ಸ್ ನ ಮಾಲಕರಾಗಿರುವ ಸುರೇಂದ್ರ ಕೆ. ಮತ್ತು ಅವರ ಕುಟುಂಬದವರು ಸೇರಿ ಯಂತ್ರಗಳ ಸಹಾಯವಿಲ್ಲದೆ ಗತಕಾಲದಂತೆ ಮಾನವ ನಿರ್ಮಿತ ಗದ್ದೆಯನ್ನು ಈಗಲೂ ಮಾಡಬೇಕೆನ್ನುವುದನ್ನು ತೋರಿಸಿಕೊಟ್ಟು ಮಾದರಿಯಾದ ಕೃಷಿಕರು.
     ಮೂಡುಬಿದಿರೆ ತಾಲೂಕಿನ ಶಿರ್ತಾಡಿಯ ಕಂದಿರುವಿನ ಜೆ.ಎನ್.ಎಸ್. ಮನೆಯೆದುರು ಸುರೇಂದ್ರ ಅವರ ಒಂದಿಷ್ಟು ಜಾಗವಿತ್ತು. ಉದ್ಯಮದೊಂದಿಗೆ ತಮ್ಮ ಕೃಷಿ ಚಟುವಟಿಕೆಯ ಮೇಲಿನ ಪ್ರೀತಿ ಇಟ್ಟುಕೊಂಡಿರುವ ಸುರೇಂದ್ರ ಅವರಿಗೆ ತಮ್ಮ ಮನೆ ಮುಂದೆಯೇ ಒಂದು ಗದ್ದೆ ಬೇಕೆಂಬ ಹಂಬಲವಿತ್ತು. ಇವರ ತಂದೆ ಕೂಡಾ ಉತ್ತಮ ಕೃಷಿಕರಾಗಿ ಹಲವು ಪುರಸ್ಕಾರಗಳನ್ನು ಗಳಿಸಿದ್ದವರು. ಕೊನೆಗಾಲದವರೆಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದವರು.
    ಹಾಗಾಗಿ ತಾನೂ ಅದೇ ಹಾದಿಯಲ್ಲಿ ಮುಂದುವರಿಯಬೇಕೆಂಬ ಇಚ್ಚೆಯಿಂದ ಮನೆ ಮುಂದಿನ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದರು. ಆದರೆ ಕೆಲವು ಕಲ್ಲು, ಮಣ್ಣು ಎಂದು ಬಾಕಿಯಾಗಿತ್ತು.
   ಜಾಗ ಸಮತಟ್ಟಾಗಿ ಒಂದು ಗದ್ದೆಯ ರೂಪಕ್ಕೆ ಬರಬೇಕಾದರೆ ಅದಕ್ಕೆ ಟ್ರ್ಯಾಕ್ಟರ್ ನ ಅಗತ್ಯವಿದೆ. 
   ಟ್ರ್ಯಾಕ್ಟರ್ ನವರು ನಾಳೆ ಬರ್ತೇವೆ, ನಾಡಿದ್ದು ಬರ್ತೇವೆ ಎಂದು ದಿನ ದೂಡಿದರೇ ವಿನಹ ಕಂದಿರುವಿನ ಆ ಕೃಷಿ ಕಾಯಕದತ್ತ ಹೋಗಲೇ ಇಲ್ಲ.
    ಟ್ರ್ಯಾಕ್ಟರ್ ನ ಹಾದಿ ನೋಡಿ ಸುಸ್ತಾದ ಸುರೇಂದ್ರ ಅವರು ತಮಗೆ ಬೇಕಾದವರನ್ನು ಬರಲು ಹೇಳಿ ಹಾರೆ ಪಿಕ್ಕಾಸನ್ನು ಕೈಗೆತ್ತಿಕೊಂಡರು. ಅವರ ತಾಯಿ ನೀಲಮ್ಮ ಪೂಜಾರ್ತಿ ಮತ್ತು ಕುಟುಂಬದ ಹಿರಿಯರೂ, ಕೃಷಿಕರೂ ಆದ ಶಿವಪ್ಪ ಪೂಜಾರಿಯವರು ಈ ಕೆಲಸಕ್ಕೆ ಮುಹೂರ್ತ ನೆರವೇರಿಸಿದರು.
     ಹಾರೆ ಪಿಕ್ಕಾಸಿನ ಮೂಲಕವೇ ನಾಲ್ಕು ದಿನಗಳಲ್ಲಿ ಕೆಲಸ ಮಾಡಿ ಒಂದು ಸುಂದರವಾದ ಗದ್ದೆ ನಿರ್ಮಿಸಿ ಮಾದರಿಯಾಗುವ ಜೊತೆಗೆ ಇತರರೂ ಈ ಮನೆಯೆದುರಿನ ಗದ್ದೆಯನ್ನು ನೋಡುವಂತೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಒಂದು ರೌಂಡ್ ಗದ್ದೆಯ ಉಳುಮೆ ಕೆಲಸವನ್ನೂ ಮಾಡಿ ಮುಗಿಸಿ ನೇಜಿ ನೆಡುವ ಕೆಲಸವನ್ನೂ ಪೂರ್ಣಗೊಳಿಸುವ ಮೂಲಕ ಮನಸ್ಸು ಮಾಡಿದರೆ ಏನೂ ಸಾಧನೆ ಮಾಡಬಹುದೆನ್ನುವುದನ್ನು ಸುರೇಂದ್ರ ಅವರು ಮಾಡಿ ತೋರಿಸಿಕೊಡುವ ಮೂಲಕ ಇನ್ನಷ್ಟು ಯುವಕರಿಗೆ ಮಾದರಿಯಾಗಿದ್ದಾರೆ.

Post a Comment

0 Comments