ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 27.64 ಲಕ್ಷ ನಿವ್ವಳ ಲಾಭ, 10 ಮಂದಿ ನಾಟಿ ವೈದ್ಯರಿಗೆ ಸನ್ಮಾನ
ಮೂಡುಬಿದಿರೆ: ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯೊಂದಿಗೆ ಜಗತ್ತು ನಿಂತಿದೆ. ಆದರೆ ಇಂದಿನ ದಿನಗಳಲ್ಲಿ ಇದನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿರುವುದರಿಂದ ಮಾನವರಲ್ಲಿ ಮನುಷ್ಯತ್ವವನ್ನು ತುಂಬುವ ಕಾರ್ಯವನ್ನು ಈ ಯೋಜನೆಯ ಮೂಲಕ ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.
ಅವರು ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆ ಇದರ ಆರನೇ ವಾರ್ಷಿಕ ಮಹಾಸಭೆಯನ್ನು ಕರಿಂಜೆ ಕಲ್ಪವೃಕ್ಷ ಸಭಾಭವನದಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮೊದಲು ನಾವು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ನಮ್ಮ ಜೀವನ ಮತ್ತು ಸ್ವತ್ತುಗಳ ಮೇಲೆ ಪ್ರೀತಿ ವಿಶ್ವಾಸವಿದ್ದಂತೆ ನೆರೆಹೊರೆಯವರಲ್ಲಿಯೂ ಇರಬೇಕು. ಪ್ರತಿಯೊಂದು ಜಾತಿ, ಮತ, ಧರ್ಮದ ಮೇಲೆಯೂ ಇರಬೇಕು ಆಗ ಮಾತ್ರ ಭಾರತ ದೇಶಕ್ಕೆ ನಿಜವಾದ ಅರ್ಥ ಬರಲು ಸಾಧ್ಯ ಎಂದ ಅವರು ಪ್ರಾಮಾಣಿಕತೆ ಮತ್ತು ನಿಸ್ವಾರ್ಥ ಭಾವನೆಯಿಂದ ಸಂಸ್ಥೆಯ ಜೊತೆ ಕೈಜೋಡಿಸಿ ಸಂಸ್ಥೆಯ ಏಳಿಗೆಗೆ ಸದಸ್ಯರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಕುವೆಟ್ಟು, ಮೂಡುಬಿದಿರೆ ಹಾಗೂ ಮಂಗಳೂರಿನಲ್ಲಿ ಹೊಸ ಶಾಖೆ ತೆರೆಯುವ ಇಂಗಿತವನ್ನೂ ಸ್ವಾಮೀಜಿ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷ ಸುಧಾಕರ್ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೊಸ ಶಾಖೆ ತೆರೆಯುವ ವಿಷಯ ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಸಮಾವೇಶ ನಡೆಸುವ ಇರಾದೆಯನ್ನೂ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಅವರು ಲೆಕ್ಕಪತ್ರ ಮಂಡಿಸಿ ಮಾತನಾಡಿ, ಸಹಕಾರಿಯು ರೂ.23,59,000 ಪಾಲು ಬಂಡವಾಳವನ್ನು ಹೊಂದಿದ್ದು, ವರದಿ ವರ್ಷ 4,01,74,788.05 ಠೇವಣಾತಿ ಹೊಂದಿದೆ. ವರದಿಯ ವರ್ಷಾರಂಭಕ್ಕೆ ನೀಡಿದ ಸಾಲಗಳು 3,62,80,323 ರೂ.ಗಳು. ಸಹಕಾರಿಯ ಒಟ್ಟು ದುಡಿಯುವ ಬಂಡವಾಳ 4,40,62,677 ರೂ. 2023-24ನೇ ಸಾಲಿನ ಒಟ್ಟು ಆದಾಯ 63,20,143 ರೂ. ಒಟ್ಟು ವೆಚ್ಚ 35,55,578 ರೂ. ಗಳಿಸಿದ ನಿವ್ವಳ ಲಾಭ 27,64,567 ರೂ. ಸದಸ್ಯರಿಗೆ ಶೇ.9 ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರವನ್ನು ಕಾಯುವ ಯೋಧರ ಹಿತರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ, ನಾವೆಲ್ಲರೂ ನೆಮ್ಮದಿಯಿಂದ ಇರಲು ಕಾರಣರಾಗಿರುವ ಭಾರತೀಯ ಸೇನೆಯ ಯೋಧರಿಗೆ ಗೌರವ ಸಲ್ಲಿಸುವ ಅಪೂರ್ವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 10 ಮಂದಿ ನಾಟಿ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ 30 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
ಹೊಸದಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಸುಧಾಕರ ಹಾಗೂ ಪ್ರಕಾಶ್ ಬಿ.ಎನ್ ಅವರನ್ನು ಅಭಿನಂದಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸುಧಾಕರ ಅವರನ್ನು ಗೌರವಿಸಲಾಯಿತು.
ನಂತರ ರೋಟರಿ ಕ್ಲಬ್ ಮೂಡುಬಿದಿರೆ ಹಾಗೂ ಜೈನ್ ಮೆಡಿಕಲ್ ಸೆಂಟರ್ ಮೂಡುಬಿದಿರೆ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಡಾ.ಪ್ರಣಮ್ಯಾ ಜೈನ್ ಗರ್ಭಕೋಶ ಹಾಗೂ ಬಾಯಿಯ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು.
ಸಂಘದ ಉಪಾಧ್ಯಕ್ಷ ಪ್ರಕಾಶ್ ಬಿ. ಎನ್, ನಿರ್ದೇಶಕರಾದ ಪ್ರಮೋದರ, ರಕ್ಷಿತ್ ಆರ್.ಕರ್ಕೇರ, ಸಂತೋಷ್, ಮೇಘನಾಥ, ಹರೀಣ್ ಸುವರ್ಣ, ಸುಹಾಸಿನಿ, ನಾಗರತ್ನ, ವಿಶ್ವನಾಥ ಶೆಟ್ಟಿ, ಭವ್ಯ, ಹೇಮಲತಾ ಎಸ್ ಉಪಸ್ಥಿತರಿದ್ದರು.
ಸ್ವಸಹಾಯ ಸಂಘದ ಸೇವಾಪ್ರತಿನಿಧಿ ರಮೇಶ್ ಎಂ ಕಾರ್ಯಕ್ರಮ ನಿರೂಪಿಸಿದರು. ಪವನ್ ಕುಮಾರ್ ಸ್ವಾಗತಿಸಿದರು. ಸಹಕಾರಿಯ ಲೆಕ್ಕಿಗ ಸಂಜಿತಾ ವರದಿ ವಾಚಿಸಿದರು. ನಿರ್ದೇಶಕ ಶ್ಯಾಮ ಎಂ ವಂದಿಸಿದರು.
0 Comments