ಶೃಂಗೇರಿಯಿಂದ ತನಿಕೋಡ್ ಗೇಟ್- ಎಸ್.ಕೆ. ಬಾರ್ಡರ್-ಸಾಣೂರುವರೆಗಿನ 27 ಕಿಲೋಮೀಟರ್ ರಸ್ತೆಗೆ 316 ಕೋಟಿ ಅನುದಾನ-ಸಂಸದ ಕೋಟ ಹೇಳಿಕೆ
ಜಿಶೃಂಗೇರಿಯಿಂದ ತನಿಕೋಡ್-ಮಾಳ-ಸಾಣೂರುವರೆಗಿನ ರಾಷ್ಟ್ರೀಯ ಹೆದ್ದಾರಿ 169ರ 27 ಕಿಲೋಮೀಟರ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಇದಕ್ಕಾಗಿ 316 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಶೃಂಗೇರಿ ಪಟ್ಟಣ ಪಂಚಾಯಿತಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಸಂಸದ ಕೋಟ ಈ ಬಗ್ಗೆ ಸ್ಪಷ್ಟನೆ ನೀಡಿದರು. ಇನ್ನುಳಿದ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶಗಳಲ್ಲಿ ಭೂ ಸ್ವಾಧೀನ ಮಾಡಿಕೊಂಡು ಮತ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಗತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕೆರೆಕಟ್ಟೆ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿದ ಸಂಸದ ಕೋಟ ಬಿಎಸ್ಎನ್ಎಲ್ ಸಮಸ್ಯೆಗಳ ಬಗ್ಗೆ ಉತ್ತರಿಸಿ ಈಗಾಗಲೇ ಕೆರೆಕಟ್ಟೆ ಪ್ರದೇಶದ ಎರಡು ಬಿಎಸ್ಎನ್ಎಲ್ ಟವರುಗಳಿಗೆ ಹೆಚ್ಚುವರಿ ಬ್ಯಾಟರಿಗಳನ್ನು ಅಳವಡಿಸುವುದಲ್ಲದೆ ಎರಡು ಹೊಸ ಟವರ್ ಗಳನ್ನು ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕೆರೆಕಟ್ಟೆ ಗ್ರಾಮ ಪಂಚಾಯತ್ ನಲ್ಲಿರುವ ಒಂದು ಟವರನ್ನು ನಿರ್ವಹಣೆ ಮಾಡುವ ಆಸಕ್ತಿ ಇದ್ದಲ್ಲಿ ಗ್ರಾಮ ಪಂಚಾಯಿತಿಗೆ ಅನುದಾನ ಒದಗಿಸಿ ನಿರ್ವಹಣೆ ಮಾಡಲು ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಂಸದರು ತಿಳಿಸಿದರು.
ಸುಮಾರು 1200 ಕುಟುಂಬಗಳು ಕುದುರೆಮುಖ ರಕ್ಷಿತಾರಣ್ಯ ಪ್ರದೇಶದಲ್ಲಿ ಬದುಕು ನಡೆಸುತ್ತಿದ್ದು ಇಲ್ಲಿಂದ ಹೊರಬರಲು ಸಿದ್ದರಿದ್ದು ಅವರಿಗೆ ಸೂಕ್ತ ಪರಿಹಾರ ನೀಡದೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸುದೀರ್ಘವಾದ ಚರ್ಚೆ ವಾದ ವಿವಾದಗಳನ್ನು ನಡೆಯಿತು. ಸಭೆಯಲ್ಲಿದ್ದ ತಹಶೀಲ್ದಾರರಾದ ಗೌರಮ್ಮ ಕಂದಾಯ ಇಲಾಖೆಯ ಪರವಾಗಿ ಮಾತನಾಡಿ ಕೆಲವು ಸಮಸ್ಯೆಗಳಿದ್ದು ಅದರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಸೂಕ್ತ ಮಾಹಿತಿ ಪಡೆದು ಸಮಸ್ಯೆ ಪರಿಹರಿಸಲಾಗುವುದು ಎಂದರು. ತೋಟಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಮಾತನಾಡಿ ತೋಟಗಾರಿಕಾ ಇಲಾಖೆಯ ಲೋಪದೋಷಗಳ ನಡುವೆಯೂ ಕೂಡ ಮತ್ತೊಮ್ಮೆ ತಾನು ಹೆಚ್ಚುವರಿ ಪರಿಹಾರ ಕೊಡಲು ಸರ್ಕಾರಕ್ಕೆ ಸೂಕ್ತ ವಿಷಯಗಳನ್ನು ಮಂಡನೆ ಮಾಡುವುದಾಗಿ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರವಾಗಿ ಮಂಜುನಾಥ ನಾಯಕ್ ಬಿಎಸ್ಎನ್ಎಲ್ ಪರವಾಗಿ ಗೋಪಾಲಕೃಷ್ಣ ಭಟ್, ರಕ್ಷಿತಾರಣ್ಯದ ಪರವಾಗಿ ಆರ್.ಎಫ್.ಓ. ಪ್ರಶಾಂತ್ ಮುಂತಾದವರು ಸುಧೀರ್ಘ ವಿವರಣೆಯನ್ನು ಒದಗಿಸಿದರು. ಸಂಕಷ್ಟಕ್ಕೆ ಒಳಗಾದ ರೈತರು ಮತ್ತು ಅರಣ್ಯ ವಾಸಿಗಳ ಪರವಾಗಿ ಸಭೆಯಲ್ಲಿದ್ದ ಮಾಜಿ ಶಾಸಕ ಜೀವರಾಜು ಮತ್ತಿತರ ಗಣ್ಯರು ಬಡವರ ಪರವಾಗಿ ಸರ್ಕಾರ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ಈ ಎಲ್ಲಾ ಮಾತುಗಳನ್ನು ಆಲಿಸಿದ ಸಂಸದಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟವಾಗಿ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವಂತಹ ಬಡವರಿಗೆ ಹಕ್ಕು ಪತ್ರ ಕೊಡುವುದು ಅಥವಾ ಪರಿಹಾರ ಕೊಡುವುದರ ಬಗ್ಗೆ ಇನ್ನೊಂದು ವಾರದಲ್ಲಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಖುದ್ದು ಸಭೆ ಕರೆದು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಕೆರೆಕಟ್ಟೆಯಲ್ಲಿ ಸುಮಾರು 400ಕ್ಕೂ ಅಧಿಕ ಜನ ಗ್ರಾಮಸ್ಥರು ಸೇರಿ ಸಂಸದರಿಗೆ ಮನವಿ ಸಲ್ಲಿಸಿದ ನಂತರ ಈ ಬಗ್ಗೆ ಸುಧೀರ್ಘ ನಡೆಸಿ ಚರ್ಚಿಸಲಾಯಿತು.
ಸಭೆಯಲ್ಲಿ ಎ.ಸಿ.ಎಫ್ ಸತೀಶ್,ಏಇಇ ಇಂದ್ರಜಿತ್, ಮೆಸ್ಕಾಂ ಅಧಿಕಾರಿ ದೀಪಕ್ ಮತ್ತು ಕೆರೆಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ, ಉಪಾಧ್ಯಕ್ಷರಾದ ನವೀನ್ ಎನ್, ಸದಸ್ಯರಾದ ಚೈತ್ರ, ಚಂದ್ರಶೇಖರ ಶೆಟ್ಟಿ, ಜ್ಯೋತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಶೃಂಗೇರಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಉಮೇಶ್ ಹಾಗೂ ಬಿಜೆಪಿ ಮುಖಂಡರಾದ ನೂತನ್, ನಯನ್, ನವೀನ್, ಅರುಣ್ ಕುಮಾರ್, ದಿನೇಶ್ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.
0 Comments