ಮೂಡುಬಿದಿರೆಯಲ್ಲಿ ಸ್ನೇಹಕೂಟವೆಂಬ ' ಮಿನಿ ಕಂಬಳ'
*ನೇಗಿಲು ಸಬ್ ಜೂನಿಯರ್ ವಿಭಾಗದ 132 ಜೊತೆ ಕೋಣಗಳು ಭಾಗಿ
ಮೂಡುಬಿದಿರೆ : ಇಲ್ಲಿನ ಒಂಟಿಕಟ್ಟೆಯ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ಭಾನುವಾರ ನೇಗಿಲು ಸಬ್ ಜೂನಿಯರ್ ವಿಭಾಗಕ್ಕಾಗಿ ನಡೆದ "ಸ್ನೇಹಕೂಟ" ದಲ್ಲಿ 132 ಜತೆ ಕೋಣಗಳು ಭಾಗವಹಿಸುವ ಮೂಲಕ ಮಿನಿ ಕಂಬಳವೇ ನಡೆದಂತೆ ಗಮನ ಸೆಳೆಯಿತು.
ನಮನ ಯುವ ಬಾಂಧವರು ಹೆನ್ ಬೆಟ್ಟು ಬೆಳುವಾಯಿ ಇವರ ನೇತೃತ್ವದಲ್ಲಿ ಕಂಬಳ ಓಟಗಾರ ದಿ.ಬೆಳುವಾಯಿ ಹೆನ್ ಬೆಟ್ಟು ರತ್ನಾಕರ ಆಚಾರ್ಯ ಅವರ ಸವಿನೆನಪಿಗಾಗಿ ಈ ಸ್ನೇಹ ಕೂಟ ಕಂಬಳವನ್ನು ಆಯೋಜಿಸಲಾಯಿತು.
ಕಂಬಳ ಕೋಣಗಳ ಯಜಮಾನ, ಜಿಲ್ಲಾ ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಎಸ್ ಕೋಟ್ಯಾನ್ ಅವರು ಕಂಬಳ ಕರೆಗೆ ದೇವರ ಪ್ರಸಾದವನ್ನು ಸಂಪ್ರೋಕ್ಷಣೆ ಮಾಡಿ ಹಾಗೂ ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಅವರು ತೆಂಗಿನ ಕಾಯಿಯನ್ನು ಒಡೆಯುವ ಮೂಲಕ ಸ್ನೇಹಕೂಟಕ್ಕೆ ಚಾಲನೆಯನ್ನು ನೀಡಿದರು.
ಇದಕ್ಕೂ ಮೊದಲು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ದಿ.ರತ್ನಾಕರ ಆಚಾರ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಕಂಬಳ ಸಮಿತಿಯ ಮಾಜಿ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ, ಕೋಣಗಳ ಯಜಮಾನ ಪಂಚಶಕ್ತಿ ರಂಜಿತ್ ಪೂಜಾರಿ ತೋಡಾರು,ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು, ನಮನ ಯುವ ಬಾಂಧವೆರ್ ಇದರ ಹರ್ಮನ್, ರಘು ಪೆಲಕುಂಜ, ಸಂತೋಷ್ ಹೆನ್ ಬೆಟ್ಟು, ಪುರುಷೋತ್ತಮ ಆಲಂಗಾರು, ಯಶವಂತ ಭಂಡಾರಿ, ಪ್ರವೀಶ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಬೆಳುವಾಯಿ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
0 Comments