*ಕನ್ನಡ ನಾಡು ನುಡಿಯ ಸೇವೆ ಮನೆಮನೆಗಳಲ್ಲಿ ನಡೆಯಲಿ: ಡಾ.ಎಂ. ಪಿ. ಶ್ರೀನಾಥ್*
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳ ವಿಕೇಂದ್ರೀಕರಣಕ್ಕಾಗಿ ಹೋಬಳಿ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಪ್ರತಿಯೊಂದು ಗ್ರಾಮ ಗ್ರಾಮದಲ್ಲಿ ಮನೆ ಮನೆಗಳಲ್ಲಿ ಕನ್ನಡದ ಮನಸ್ಸನ್ನು ಬಿತ್ತುವ ಬೆಳೆಸುವ ಕಾರ್ಯ ಸಾಹಿತ್ಯ ಪರಿಷತ್ತಿನಿಂದ ಆಗಬೇಕಾಗಿದೆ. ಇಂತಹ ಕೆಲಸವನ್ನು ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಪರಿಷತ್ತಿನ ಜೊತೆಯಲ್ಲಿ ಹೋಬಳಿ ಘಟಕದ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಕನ್ನಡದ ಮನಸ್ಸನ್ನು ಬಿತ್ತುವ ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ. ಮೂಡುಬಿದಿರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಈ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಲಿ. ಕನ್ನಡ ನಾಡು ನುಡಿಯ ಸೇವೆ ಮನೆ ಮನೆಗಳಲ್ಲಿ ಮನಮನೆಗಳಲ್ಲಿ ನಡೆಯಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾಕ್ಟರ್ ಎಂಪಿ ಶ್ರೀನಾಥ್ ಅವರು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಅವರು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಮೂಡುಬಿದರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಗ್ರಹಣ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಡುಬಿದರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡಿದರು.
ಮೂಡುಬಿದಿರೆ ಹೋಬಳಿ ಘಟಕದ ಅಧ್ಯಕ್ಷರಾದ ಡಾ.ರಾಮಕೃಷ್ಣ ಶಿರೂರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಬೆಳವಣಿಗೆಯ ಹಂತಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಮೂಡುಬಿದಿರೆ ತಾಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಸೌಮ್ಯ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಯಸ್ ಅವರು ಸಾಹಿತ್ಯ ಪರಿಷತ್ತಿನ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಮತ್ತು
ಸಾಹಿತ್ಯಾಸಕ್ತಿಯನ್ನು ಬೆಳೆಸುವ ಕೆಲಸ ಹೋಬಳಿ ಸಾಹಿತ್ಯ ಪರಿಷತ್ತಿನ ಮೂಲಕ ನಡೆಯಲಿ ಎಂದು ಹಾರೈಸಿದರು.
ತಾಲೂಕು ಘಟಕದ ಪದಾಧಿಕಾರಿಗಳು, ಸಾಹಿತ್ಯ ಅಭಿಮಾನಿಗಳ ಆಗಮನ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದೆ. ಶ್ರೀಮತಿ ನಾಗರತ್ನ ಶಿರೂರು ಧನ್ಯವಾದ ಸಲ್ಲಿಸಿದರು.
ಡಾ.ದೊರೆಸ್ವಾಮಿ ಅವರು ಕಾರ್ಯಕ್ರಮ ನಿರ್ವಹಿಸಿದರು.
0 Comments