5ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನೇತಾಜಿ ಬ್ರಿಗೇಡ್
* ಆ.18ರಂದು ಉಚಿತ ವೈದ್ಯಕೀಯ ಶಿಬಿರ, ಅಂಗಾಂಗ ದಾನ ಮಾಹಿತಿ, ಸನ್ಮಾನ, ಚಿತ್ರಕಲಾ ಸ್ಪರ್ಧೆ
ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಜೀವಸಾರ್ಥಕತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ, ಚಿತ್ರಕಲಾ ಸ್ಪರ್ಧೆ, ಅಂಗಾಂಗ ದಾನ ಮಾಹಿತಿ ಮತ್ತು ನೋಂದಾವಣೆ, ಸಹಾಯಧನ ವಿತರಣೆ, ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಆ.18ರಂದು ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ನೇತಾಜಿ ಬ್ರಿಗೇಡ್ ನ ಸ್ಥಾಪಕಾಧ್ಯಕ್ಷ ರಾಹುಲ್ ಕುಲಾಲ್ ತಿಳಿಸಿದ್ದಾರೆ.
ಅವರು ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳುವ ಸಭಾ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಉದ್ಘಾಟಿಸಲಿದ್ದು ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನೇತಾಜಿ ಬ್ರಿಗೇಡ್ ನ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಚಿವ ಅಭಯಚಂದ್ರ ಸಹಿತ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11 ರಿಂದ ವಿವಿಧ ವಿಭಾಗದ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಸಮಾಜದ ಅಸಕ್ತ ಮತ್ತು ಅನಾರೋಗ್ಯಕ್ಕೀಡಾದ ಕುಟುಂಬಗಳಿಗೆ ಸಹಾಯಧನ ವಿತರಣೆ, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸನ್ಮಾನ ಮತ್ತು ಸಮಾಜಮುಖಿ ಸೇವೆಗೈಯ್ಯುತ್ತಿರುವ ಸಂಘ ಸಂಸ್ಥೆಗಳಿಗೆ ಗೌರವಾರ್ಪಣೆ ನಡೆಯಲಿದ್ದು ದ.ಕ.ಸಂಸದ ಬೃಜೇಶ್ ಚೌಟ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಕ್ಸಲೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮತ್ತಿತರರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಸಂಜೆ 4 ರಿಂದ ದಿನೇಶ್ ಕೋಡಪದವು ಮತ್ತು ತಂಡದವರಿಂದ ಯಕ್ಷ ಹಾಸ್ಯ ವೈಭವ ನಡೆಯಲಿದೆ ಎಂದು ತಿಳಿಸಿದ ಕುಲಾಲ್ ಅವರು ನೇತಾಜಿ ಬ್ರಿಗೇಡ್ ಕಳೆದ ನಾಲ್ಕು ವರ್ಷಗಳಿಂದ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು 142 ವಾರಗಳ ಸ್ವಚ್ಛತಾ ಅಭಿಯಾನ, ಜಾತ್ರಾ ಮಹೋತ್ಸವ, ಕಂಬಳಗಳಲ್ಲಿ ವಿಶೇಷ ವೇಷಗಳನ್ನು ಧರಿಸಿ 20ಲಕ್ಷಕ್ಕಿಂತಲೂ ಅಧಿಕ ಧನ ಸಂಗ್ರಹಿಸಿ ಅನಾರೋಗ್ಯ ಪೀಡಿತರಿಗೆ ಮತ್ತು ಅಸಕ್ತರಿಗೆ ನೆರವು, ಗೋಡೆ ಬರಹಗಳ ಮೂಲಕ ಜಾಗೃತಿ, ಸಹಿತ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ನೇತಾಜಿ ಬ್ರಿಗೇಡ್ ನ ಆಧ್ಯಕ್ಷ ದಿನೇಶ್ ಶೆಟ್ಟಿ, ಸಹ ಸಂಚಾಲಕ ಕುಮಾರ್ ಮಾಸ್ತಿಕಟ್ಟೆ, ಕೋಶಾಧಿಕಾರಿ ನಿತಿನ್ ಭಟ್ ಮತ್ತು ಸ್ವಚ್ಛತಾ ಪ್ರಮುಖ್ ಶರಣ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
0 Comments