ಕುಸಿದು ಬೀಳಲಿದ್ದ ಮನೆಗೆ ದಾನಿಗಳಿಂದ ಕಾರ್ಯಕಲ್ಫ
ಮೂಡುಬಿದಿರೆ: ಗಾಳಿ-ಮಳೆಗೆ ಇಂದೋ ನಾಳೆಯೋ ಕುಸಿದು ಬೀಳಲಿದ್ದ ಒಂಟಿ ಮಹಿಳೆಯ ಮನೆಯೊಂದಕೆ ಪಂಚಾಯತ್ ಉಪಾಧ್ಯಕ್ಷರು ಮತ್ತು ದಾನಿಗಳು ಸೇರಿ ಆ ಮನೆಗೆ ಕಾಯಕಲ್ಪ ನೀಡಿ ಮಾನವೀಯತೆ ಮೆರೆದಿದ್ದಾರೆ.
ಪುತ್ತಿಗೆ ಗ್ರಾ.ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಫಾಲ್ಸ್ ಬಳಿಯ ನಿವಾಸಿ ದಿ.ಸೀತಾರಾಮ ಆಚಾರ್ಯ ಅವರ ಪುತ್ರಿ ರೇವತಿಯಾಗಿದ್ದು ತಂದೆ-ತಾಯಿಯ ಮರಣ ನಂತರ ಒಬ್ಬರೇ ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದರು.
ಇತ್ತೀಚೆಗೆ ಸುರಿದ ಭಾರೀ ಮಳೆಗಾಳಿಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದಿದ್ದಲ್ಲದೆ ಹೆಂಚು ಹಾರಿ ಹೋಗಿತ್ತು. ತನ್ನ ಮನೆಯ ಪರಿಸ್ಥಿತಿಯನ್ನು ಕಂಡು ಕಂಗಾಲಾಗಿದ್ದ ರೇವತಿ ಅವರು ತಕ್ಷಣ ಅದೇ ವಾರ್ಡಿನ ಸಮಾಜ ಸೇವಕ, ಎಪಿಎಂಸಿ ನ ಮಾಜಿ ಸದಸ್ಯ ವಾಸುದೇವ ನಾಯಕ್ ಅವರ ಗಮನಕ್ಕೆ ತಂದರು. ಸಮಸ್ಯೆಗೆ ಸ್ಪಂದಿಸಿದ ವಾಸುದೇವ ನಾಯಕ್ ಅವರು ಪಂಚಾಯತ್ ಗಮನಕ್ಕೆ ತಂದದ್ದಲ್ಲದೆ, ಪಾಲಡ್ಕ ಗ್ರಾ.ಪಂನ ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ ಅವರ ಗಮನಕ್ಕೂ ತಂದರು.
ಈ ಮನೆಯಲ್ಲಿ ವಾಸವಿರುವವರು ಒಂಟಿ ಮಹಿಳೆ ರೇವತಿ ಮಾತ್ರ. ಹಿರಿಯರ ಕಾಲದ ಮನೆ ಇದಾಗಿದ್ದು ಇದನ್ನು ಆಶ್ರಯ ಯೋಜನೆಯಲ್ಲಿ ನಿರ್ಮಿಸಲಾಗಿತ್ತು.
ಮನೆ ಬಿದ್ದು ಅನಾಹುತ ಸಂಭವಿಸುವುದು ಬೇಡ ಎಂದು ಮನಗಂಡ ಇಬ್ಬರು ಸಮಾಜ ಸೇವಕರು ಸೇರಿ ಮನೆಗೆ ಕಾರ್ಯಕಲ್ಪ ನೀಡುವುದೆಂದು ತೀರ್ಮಾನಿಸಿ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿದರು. ಪಂಚಾಯತ್ ತುರ್ತು ವ್ಯವಸ್ಥೆಗಾಗಿ ರೂ. 5000 ವನ್ನು, ತಹಶೀಲ್ದಾರ್ ಮೂಲಕ ಐವತ್ತು ಸಾವಿರ, ಪ್ರವೀಣ್ ಸಿಕ್ವೇರಾ, ವಾಸುದೇವ ನಾಯಕ್ ಮತ್ತು ವಿಶ್ವಕರ್ಮ ಸಮಾಜದಿಂದ ಸೇರಿ 30,000 ಹೀಗೆ ಒಟ್ಟು 85000 ಸಹಾಯಧನ ಒಟ್ಟಾಗಿದೆ. ಪಂಚಾಯತ್ ಸದಸ್ಯೆ ಆನ್ಸಿಲ್ಲಾ ಮೆಟಿಲ್ಡಾ ಮತ್ತು ಮೂಡುಬಿದಿರೆ "ಯು ಡ್ರೈವ್" ವಾಹನ ತರಬೇತಿ ಕೇಂದ್ರದವರು ಮನೆಗೆ ಬೇಕಾಗುವಷ್ಟು ಹೆಂಚನ್ನು ಒದಗಿಸಿದ್ದಾರೆ.
ಹಣ ಬೇಕಾದಷ್ಟು ಸಾಲದೆ ಇರುವುದರಿಂದ ಇದ್ದಷ್ಟು ಹಣದಲ್ಲಿಯೇ ಹೊಂದಿಸಿಕೊಂಡು ಮನೆಯನ್ನು ದುರಸ್ಥಿ ಮಾಡಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿರುತ್ತಾರೆ.
ಮನೆಯು ಸಂಪೂರ್ಣ ಹಾಳಾಗಿರುವುದರಿಂದ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆಯಿರುತ್ತದೆ. ಆದರೆ ಬಿದ್ದು ಹೋಗಲಿದ್ದ ಮನೆಗೆ ಕಾರ್ಯಕಲ್ಪ ನೀಡುವ ನೀಡುವ ಮೂಲಕ ಈ ಇಬ್ಬರು ಸಮಾಜಸೇವಕರು ಮಾನವೀಯತೆ ಮೆರೆದಿದ್ದಾರೆ.
0 Comments